ವಕ್ಫ್ ಕಾಯ್ದೆ ರದ್ದಾಗದಿದ್ದಲ್ಲಿ ಧರ್ಮ ಯುದ್ಧ ನಿಶ್ಚಿತ
Tuesday, November 5, 2024
ಲೋಕಬಂಧು ನ್ಯೂಸ್, ವಿಜಯಪುರ
ವಕ್ಫ್ ಕಾಯ್ದೆ ರದ್ದಾಗದಿದ್ದರೆ ಧರ್ಮ ಯುದ್ಧ ಆಗುವುದು ನಿಶ್ಚಿತ. ಧರ್ಮ ಯುದ್ಧಕ್ಕೆ ನಾನು ಸಂಪೂರ್ಣವಾಗಿ ತಯಾರಾಗಿದ್ದೇನೆ, ಶಿವನ ಕೈಯಲ್ಲಿ ಏನಿದೆ? ಚಾಮುಂಡಿ ಕೈಯಲ್ಲಿ ಏನಿದೆ? ಅವುಗಳನ್ನು ಕೈಗೆ ತೆಗೆದುಕೊಳ್ಳಿ, ವಕ್ಫ್ ಕಾಯ್ದೆಯನ್ನು ದೇಶದಿಂದ ಕಿತ್ತೊಗೆಯುವ ವರೆಗೆ ಸುಮ್ಮನಿರುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ.ವಕ್ಫ್ ಕಾಯ್ದೆ ರದ್ದುಗೊಳಿಸಿ ರೈತರ ಹಿತರಕ್ಷಣೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನ.4ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಕ್ಫ್ ಕಾಯ್ದೆ ಕೈಬಿಡದೇ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಸೇರುವುದು ಗ್ಯಾರಂಟಿ ಎಂದರು.
ಇಸ್ಲಾಂನಲ್ಲಿ ಸಹೋದರತೆ ಭಾವನೆ ಇಲ್ಲ. ಇತರ ಧರ್ಮದವರನ್ನು ಸೈತಾನ್ ಎಂದು ಕರೆಯುತ್ತಾರೆ. ನಮಗೆ ದೇಶ ಮೊದಲು ಆ ಬಳಿಕ ಧರ್ಮ, ಆನಂತರ ಪಕ್ಷ ಎನ್ನುತ್ತೇವೆ. ಆದರೆ, ಮುಸ್ಲಿಮರು ಧರ್ಮ ಮೊದಲು, ಆ ಮೇಲೆ ದೇಶ ಎನ್ನುತ್ತಾರೆ. ವಕ್ಫ್ ತೂಗುಗತ್ತಿ ಉಪಚುನಾವಣೆ ನಂತರ ಮತ್ತೆ ರೈತರ ಮೇಲೆ ಬರಲಿದೆ ಎಂದು ಎಚ್ಚರಿಸಿದರು.
ಜೋಳ, ಕಾಳು ಕೊಡುವವರು ಹಿಂದುಗಳೇ ಹೊರತು ಮುಸ್ಲಿಮರಲ್ಲ. ಹಿಂದೂ ಮಠಾಧೀಶರು ರೈತರ ಬೆಂಬಲಕ್ಕೆ ಬರಬೇಕು. ಲಿಂಗಾಯತರು, ಮುಸ್ಲಿಮರು ಸಮಾನರು ಎಂದು ಕೆಲವು ಲಿಂಗಾಯತ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವುದು ಖಂಡನೀಯ.
ಒಬ್ಬ ಸ್ವಾಮೀಜಿ ಮಸೀದಿ ಉದ್ಘಾಟನೆ ಮಾಡಿದರೆ ಇಡೀ ಊರು ಇಸ್ಲಾಮೀಕರಣ ಮಾಡಿದಂತೆ. ಕೆಲವು ಸ್ವಾಮೀಜಿಗಳು ಕುರಾನ್ ಪಠಿಸುತ್ತಾರೆ. ಅದರ ಬದಲು ಭಗವದ್ಗೀತೆ ಪಠಿಸಿ ಎಂದು ಎಚ್ಚರಿಕೆ ನೀಡಿದರು.