
ಲೊಂಬಾರ್ಡ್ ಆಸ್ಪತ್ರೆಗೆ ಜಿಜಿಎಚ್ಎಚ್ ಪ್ರಶಸ್ತಿ
Friday, November 8, 2024
ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಗೆ ಸುಸ್ಥಿರ ಆರೋಗ್ಯ ಸೇವೆಯನ್ನು ಉತ್ತೇಜಿಸುವ ಪ್ರವರ್ತಕ ಪ್ರಯತ್ನಗಳಿಗಾಗಿ ಗ್ಲೋಬಲ್ ಗ್ರೀನ್ ಮತ್ತು ಹೆಲ್ತ್ ಹಾಸ್ಪಿಟಲ್ಸ್ (ಜಿಜಿಎಚ್‌ಎಚ್) ನೆಟ್‌ವರ್ಕ್ ವಿಶೇಷ ಪ್ರಶಸ್ತಿ ನೀಡಿದೆ.
ಅ.30ರಿಂದ ನ.1ರ ವರೆಗೆ ವಿಯೆಟ್ನಾಮ್‌ನ ಹೈಫಾಂಗ್ ಪಟ್ಟಣದಲ್ಲಿ ನಡೆದ ಹವಾಮಾನ ಬದಲಾವಣೆ ಮತ್ತು ಆರೋಗ್ಯದ ಕುರಿತಾದ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ ಮತ್ತು 6ನೇ ಏಷ್ಯಾ- ಪೆಸಿಫಿಕ್ ಗ್ರೀನ್ ಹೆಲ್ತ್‌ಕೇರ್ ಸಿಸ್ಟಮ್ ಸಮ್ಮೇಳನದಲ್ಲಿ ಲೊಂಬಾರ್ಡ್ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸುಶಿಲ್ ಜತನ್ನ ಪ್ರಶಸ್ತಿ ಸ್ವೀಕರಿಸಿದರು.
ಆಗ್ನೇಯ ಏಷ್ಯಾದ ಹಾನಿಯಿಲ್ಲದ ಆರೋಗ್ಯ ರಕ್ಷಣೆ ಸಂಸ್ಥೆ ಆರೋಗ್ಯ ಪರಿಸರದ ಸಂಶೋಧನೆ ಮತ್ತು ಅಭಿವದ್ಧಿ ಕೇಂದ್ರ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ), ಎಫ್‌ಎಚ್‌ಐ 360, ಯುನಿಸೆಫ್ ಮತ್ತು ಯುಎನ್‌ಡಿಪಿ ಈ ಸಮ್ಮೇಳನವನ್ನು ವಿಯೆಟ್‌ನಾಮ್‌ನ ಆರೋಗ್ಯ ಸಚಿವಾಲಯ, ಹೈಫಾಂಗ್ ಯೂನಿವರ್ಸಿಟಿ ಆಫ್ ಮೆಡಿಸಿನ್ ಆ್ಯಂಡ್ ಫಾರ್ಮಸಿ ಮತ್ತು ವಿಯೆಟ್ನಾಮ್ ಆರೋಗ್ಯ ಪರಿಸರ ನಿರ್ವಹಣಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿತ್ತು.
ಲೊಂಬಾರ್ಡ್ ಆಸ್ಪತ್ರೆಗೆ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೌರವ ಮಹತ್ವದ ಮೈಲಿಗಲ್ಲು ಮತ್ತು ನಾವು ಕರಾವಳಿ ಕರ್ನಾಟಕದಲ್ಲಿ ಪರಿಸರ ಸ್ನೇಹಿ, ಸುಸ್ಥಿರ ಆರೋಗ್ಯ ಸೇವೆಯತ್ತ ನಮ್ಮ ಪ್ರಯಾಣವನ್ನು ಮುಂದುವರಿಸುವಲ್ಲಿ ಸ್ಪೂರ್ತಿ ದಾಯಕವಾಗಿದೆ ಎಂದು ಡಾ. ಸುಶಿಲ್ ಜತನ್ನ ತಿಳಿಸಿದ್ದಾರೆ.