-->
ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದಾತಗೆ ಕಠಿಣ ಸಜೆ

ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದಾತಗೆ ಕಠಿಣ ಸಜೆ

ಲೋಕಬಂಧು ನ್ಯೂಸ್, ಉಡುಪಿ
ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ.ಕುಂದಾಪುರದ ನಿವಾಸಿ ಮಿಥುನ್ (21) ಶಿಕ್ಷೆಗೆ ಗುರಿಯಾದ ಆರೋಪಿ.


ಆತ 17ವರ್ಷ ಪ್ರಾಯದ ನೊಂದ ಬಾಲಕಿಯನ್ನು ಕಾಲೇಜಿಗೆ ತೆರಳುವ ವೇಳೆ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಪುಸಲಾಯಿಸಿದ್ದು, 2023ರ ಜನವರಿಯಿಂದ ಆಕೆಯ ಇಚ್ಛೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ.


ನಂತರ ಬಾಲಕಿಯ ಆರೋಗ್ಯದಲ್ಲಾದ ವ್ಯತ್ಯಾಸ ಗಮನಿಸಿದ ಪೋಷಕರು ವೈದ್ಯಕೀಯ ಪರೀಕ್ಷೆ ನಡೆಸಿದರು. ಅದರಿಂದ ಆಕೆ ಗರ್ಭಿಣಿ ಎಂಬುದು ತಿಳಿದು, ಪ್ರಕರಣ ಬೆಳಕಿಗೆ ಬಂತು.


ಸಂತ್ರಸ್ತೆಯ ತಂದೆ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ನಂದ ಕುಮಾರ್, ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಆ ಬಗ್ಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅಭಿಯೋಜನೆ ಪರ ಒಟ್ಟು ಸಲ್ಲಿಸಲಾದ 30 ಸಾಕ್ಷಿಗಳ ಪೈಕಿ 16 ಸಾಕ್ಷಿಗಳ ವಿಚಾರಣೆ, ವಾದ ಹಾಗೂ ಪ್ರತಿವಾದಗಳನ್ನು ಮತ್ತು ಡಿಎನ್‌ಎ ಸಾಕ್ಷಿ ಪರಿಗಣಿಸಿ, ಆರೋಪಿ ದೋಷಿ ಎಂಬುದಾಗಿ ಅಭಿಪ್ರಾಯಪಟ್ಟರು.


ಅದರಂತೆ ಆರೋಪಿಗೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆ ಮತ್ತು 21 ಸಾವಿರ ರೂ. ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ 15 ಸಾವಿರ ರೂ. ಬಾಲಕಿಗೆ, 6 ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದರು.


ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article