ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆ ಇಡಬೇಕು
Wednesday, November 6, 2024
ಲೋಕಬಂಧು ನ್ಯೂಸ್, ಉಡುಪಿ
ಮಣಿಪಾಲದ ಸಂಪೂರ್ಣ ಫೌಂಡೇಶನ್ ವತಿಯಿಂದ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಮಂಗಳವಾರ ನಡೆದ 'ಇಲ್ಲ ಸಲ್ಲದ ಭಯ, ಪರೀಕ್ಷೆ ಭಯ' ಚಲನಚಿತ್ರವನ್ನು ದೈಜಿ ವರ್ಲ್ಡ್ ಮೀಡಿಯಾ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಪದವಿ ಪ್ರಮಾಣಪತ್ರಗಳು ಉಪಯೋಗಕ್ಕೆ ಬಾರದಿದ್ದರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆಗಳನ್ನಿಡಬೇಕು. ಅನ್ಯರಿಗೆ ನೆರವಿನ ಹಸ್ತ ಚಾಚಬೇಕು ಎಂದರು.
ಹಿಂದೆಲ್ಲಾ ಕಠಿಣ ಪರಿಶ್ರಮ (ಹಾರ್ಡ್ ವರ್ಕ್)ಕ್ಕೆ ಮಾನ್ಯತೆಯಿದ್ದರೆ ಇಂದು ಸ್ಮಾರ್ಟ್ ವರ್ಕ್ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರು.
ಹಿಡಿದ ಕೆಲಸ, ಕಂಡ ಕನಸನ್ನು ಸಾಧಿಸುವ ಛಲ, ಹಂಬಲ ಬೇಕು. ಮಾಡುವ ಪ್ರತಿಯೊಂದು ಕೆಲಸವನ್ನೂ ಪ್ರೀತಿಯಿಂದ ಮಾಡಬೇಕು. ಸಾಧನೆಯ ಹಾದಿ ಯಲ್ಲಿ ಅನ್ಯರ ಜೊತೆ ಹೋಲಿಕೆ ಬೇಡ. ತಪ್ಪು ಪ್ರಕೃತಿ ನಿಯಮ, ತಪ್ಪಿನಿಂದ ಪಾಠ ಕಲಿಯಿರಿ. ಆದರೆ, ಮಾಡಿದ ತಪ್ಪಿನ ಪುನರಾವರ್ತನೆ ಸಲ್ಲದು ಎಂದವರು ಹೇಳಿದರು.
ಜಿಲ್ಲಾ ಶಾಲಾ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಗಣಪತಿ, ಪಿಐಎಂ ನಿರ್ದೇಶಕ ಡಾ.ಪಿ.ಎಸ್.ಐತಾಳ್ ಮಾತನಾಡಿ ದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಮು, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರತಿಮಾ ಬಾಳಿಗಾ, ಎಲಿಝಾ ವಾಝ್ ಉಪಸ್ಥಿತರಿದ್ದರು.
ನಿರ್ಮಾಪಕ ವಿ.ಪಿ.ಡೇಸಾ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.