ಉಡುಪಿಯಲ್ಲಿ ವಕ್ಫ್ ಬೋರ್ಡ್ ನೋಟಿಸ್, ಪಹಣಿ ತಿದ್ದುಪಡಿ ಗಮನಕ್ಕೆ ಬಂದಲ್ಲಿ ತಕ್ಷಣ ಮಾಹಿತಿ ನೀಡಿ
Saturday, November 2, 2024
ಲೋಕಬಂಧು ನ್ಯೂಸ್, ಉಡುಪಿ
ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ವಕ್ಫ್ ಬೋರ್ಡ್ ನೋಟೀಸ್ ನೀಡಿ ಗೊಂದಲ ಸೃಷ್ಟಿಯಾಗಿದ್ದು, ಹಲವರ ಪಹಣಿಯಲ್ಲಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಥ ಸಮಸ್ಯೆ ಉಂಟಾದಲ್ಲಿ ತಕ್ಷಣ ಶಾಸಕರ ಕಚೇರಿಗೆ ಮಾಹಿತಿ ನೀಡುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.ರಾಜ್ಯ ಸರ್ಕಾರದ ದಿಶಾಂಕ್ ಆ್ಯಪ್ ನಲ್ಲಿ ಉಡುಪಿಯ ಶಿವಳ್ಳಿ ಗ್ರಾಮದ ಸರ್ವೇ ನಂಬರ್ ಪರಿಶೀಲನೆ ನಡೆಸಿದಾಗ ಸುಲ್ತಾನಪುರ ಎಂಬ ಅಪರಿಚಿತ ಊರಿನ ಹೆಸರು ನಮೂದಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಸ್ಪಷ್ಟನೆ ನೀಡಿ ಗೊಂದಲ ನಿವಾರಿಸಬೇಕು ಎಂದು ಶಾಸಕ ಯಶಪಾಲ್ ಸೂಚಿಸಿದ್ದಾರೆ.
ವಕ್ಫ್ ಬೋರ್ಡ್ ಅವೈಜ್ಞಾನಿಕ, ಕಾನೂನುಬಾಹಿರವಾಗಿ ನೋಟೀಸ್ ನೀಡಿ ಸಮಸ್ಯೆ ಸೃಷಿಸಿದೆ. ಸರ್ಕಾರ ತಕ್ಷಣ ಎಲ್ಲಾ ನೋಟೀಸ್ ಗಳನ್ನು ಹಿಂಪಡೆಯಬೇಕು.
ಮುಂಬರುವ ದಿನಗಳಲ್ಲಿ ಕರಾವಳಿ ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳ ಜಾತ್ರೆ,ಉತ್ಸವ ಆರಂಭಗೊಳ್ಳಲಿದ್ದು ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಜಾತ್ರೆಯಲ್ಲಿ ವ್ಯಾಪಾರ ಮಾಡುವ ವ್ಯಕ್ತಿಗಳು ಸಂಬಂಧಿತ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಹಾಗೂ ದೇವಸ್ಥಾನಗಳ ಆಡಳಿತ ಸಮಿತಿಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಸ್ಥಳೀಯಾಡಳಿತ ಸಂಸ್ಥೆಗಳು ನಿಯಮ ರೂಪಿಸುವ ಅಗತ್ಯತೆ ಇದೆ ಎಂದು ಯಶಪಾಲ್ ಸುವರ್ಣ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.