-->
ಆಂಗ್ಲರ ಪ್ರವೇಶಕ್ಕೂ ಮುನ್ನ ಭಾರತದಲ್ಲಿತ್ತು ರಾಷ್ಟ್ರೀಯತೆಯ ಪರಿಕಲ್ಪನೆ

ಆಂಗ್ಲರ ಪ್ರವೇಶಕ್ಕೂ ಮುನ್ನ ಭಾರತದಲ್ಲಿತ್ತು ರಾಷ್ಟ್ರೀಯತೆಯ ಪರಿಕಲ್ಪನೆ

ಲೋಕಬಂಧು ನ್ಯೂಸ್
ಉಡುಪಿ, ಫೆ.27: ಆಂಗ್ಲರು ಭಾರತಕ್ಕೆ ಬರುವ ಹಿಂದೆಯೇ ನಮ್ಮಲ್ಲಿ ರಾಷ್ಟ್ರೀಯತೆಯ ಕಲ್ಪನೆ ಇತ್ತು. ಆದಿ ಶಂಕರಾಚಾರ್ಯರು ಸಾವಿರ ವರ್ಷಗಳ ಹಿಂದೆಯೇ ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠ ಹಾಗೂ ಕಾಶ್ಮೀರದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿದ್ದರು ಎಂದು ಇತಿಹಾಸ ತಜ್ಞ ವಿಕ್ರಮ್ ಸಂಪತ್ ಹೇಳಿದರು.
ಗುರುವಾರ ನಗರದ ಪುರಭವನದಲ್ಲಿ ದಿ.ಡಾ.ಪಾದೂರು ಗುರುರಾಜ್ ಭಟ್ ಜನ್ಮಶತಾಬ್ದಿಯ ನೆನಪಿಗಾಗಿ ಡಾ.ಪಾದೂರು ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಭಾರತೀಯ ಇತಿಹಾಸ ಮತ್ತು ವಿಶೇಷವಾಗಿ ದೇವಾಲಯಗಳು ಮತ್ತು ದೇವತಾಮೂರ್ತಿಗಳ ಕುರಿತಾದ ಸಂಶೋಧನೆಯಲ್ಲಿ ಇದುವರೆಗೆ ಸಾಗಿಬಂದ ವಿವರಗಳನ್ನು ಕೇಂದ್ರೀಕರಿಸಿ ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ದರಾದ ವಿದ್ವಾಂಸರ ಸಮಾವೇಶದಲ್ಲಿ ಮಾತನಾಡಿದರು.
ತಪ್ಪು ಕಲ್ಪನೆ
ಭಾರತಕ್ಕೆ ರೈಲು, ಸೇತುವೆ, ಶಿಕ್ಷಣದ ಕಲ್ಪನೆಯನ್ನು ಆಂಗ್ಲರು ನೀಡಿದರು, ಅವರು ಬಂದ ಬಳಿಕ ಭಾರತ ಸಾಮಾಜಿಕ, ಶೈಕ್ಷಣಿಕವಾಗಿ ಉನ್ನತಿ ಹೊಂದಿತು ಎಂದು ಬಿಂಬಿಸಲಾಗಿದೆ. ಆದರೆ, ಅದು ತಪ್ಪು ಕಲ್ಪನೆ. ತಿರುಚಿದ ಇತಿಹಾಸದ ಸತ್ಯವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯತೆ ಇದೆ ಎಂದವರು ಪ್ರತಿಪಾದಿಸಿದರು.


ತಪ್ಪು ಇತಿಹಾಸದಿಂದ ‌ಮಾರಕ
ದೆಹಲಿ ಕೇಂದ್ರಿತ ಇತಿಹಾಸವನ್ನು ಬೋಧಿಸಲಾಗುತ್ತಿದೆ. 600 ವರ್ಷದ ಇತಿಹಾಸವಿರುವ ಮೈಸೂರು ಸಂಸ್ಥಾನದ ಬಗ್ಗೆಯೇ ಪಾಠಗಳಲ್ಲಿ ಪೂರ್ಣ ಪ್ರಮಾಣದ ಮಾಹಿತಿಗಳಿಲ್ಲ. ಇತಿಹಾಸ ರಾಷ್ಟ್ರದ ಕನ್ನಡಿ ಇದ್ದಂತೆ. ಸರಿಯಾದ ಇತಿಹಾಸದಿಂದ ಜನಾಂಗವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಕನ್ನಡಿ ಒಡೆದರೆ ಮುಖ ವಿಕೃತಿಯಾಗಿ ಕಾಣುವಂತೆ, ತಪ್ಪು ಇತಿಹಾಸದಿಂದ ದೇಶದ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.


ಭಾರತದ ಇತಿಹಾಸದಿಂದಲೂ ಐಕ್ಯತೆ ಕಂಡುಬರುತ್ತದೆ. ಗುಜರಾತ್, ಕರ್ನಾಟಕ ಸೇರಿದಂತೆ ಅನೇಕ ರಾಜರು ಕಾಶಿ ವಿಶ್ವನಾಥ ಮಂದಿರಕ್ಕೆ ದತ್ತಿ ನೀಡಿರುವುದು ಇತಿಹಾಸ ಅಧ್ಯಯನದಿಂದ ತಿಳಿದು ಬರುತ್ತದೆ ಎಂದರು.


ಭಾರತದ ಇತಿಹಾಸದಲ್ಲಿ ದಾಳಿಕೋರರನ್ನು ವಿಜೃಂಭಿಸಲಾಗಿದೆ. ಕ್ರಿ.ಶ. 712ನೇ ಶತಮಾನದಿಂದ ಕ್ರಿ.ಶ. 1222ರ ವರೆಗೆ ಸುಮಾರು 500 ವರ್ಷಗಳ ಕಾಲ ಅರಬ್ ದಾಳಿಕೋರರನ್ನು ದೇಶದ ಗಡಿ ದಾಟದಂತೆ ತಡೆಹಿಡಿಯಲಾಗಿತ್ತು. ಆ ರಾಜರ ಪೌರುಷದ ಬಗ್ಗೆ ಉಲ್ಲೇಖಗಳಿಲ್ಲ. ಕ್ಷಾತ್ರ ಪರಂಪರೆಯನ್ನು ಮುಚ್ಚಿಟ್ಟು ಸೋಲನುಭವಿಸಿದರು ಎಂಬ ಮನೋಭಾವ ಬಿತ್ತಲು ವ್ಯವಸ್ಥಿತವಾಗಿ ಪ್ರಯತ್ನಿಸಲಾಗಿದೆ ಎಂದರು.
ವೇದಿಕೆಯಲ್ಲಿ ಡಾ. ಮಾಲತಿ ಕೃಷ್ಣಮೂರ್ತಿ, ಪ್ರೊ.ಶ್ರೀಪತಿ ತಂತ್ರಿ ಉಪಸ್ಥಿತರಿದ್ದರು. ವಿಶ್ವನಾಥ್ ಪಾದೂರು ಸ್ವಾಗತಿಸಿದರು.


ಚಂಬಲ್ ಕಣಿವೆ ಉಪನ್ಯಾಸ
ಭಾರತೀಯ ಪ್ರಾಚೀನ ದೇವಾಲಯಗಳ ಪುನರ್ ನಿರ್ಮಾಣದ ಬಗ್ಗೆ ಇತಿಹಾಸ ತಜ್ಞ ಕೆ.ಕೆ.ಮಹಮ್ಮದ್ ಉಪನ್ಯಾಸ ನೀಡಿ, ಚಂಬಲ್ ಕಣಿವೆಯಲ್ಲಿ ಡಕಾಯಿತರ ಸಹಕಾರದೊಂದಿಗೆ ನಿರ್ಮಿಸಿದ ಭಟೇಶ್ವರ ದೇವಾಲಯದ ಬಗ್ಗೆ ವಿವರಿಸಿದರು.
ಧಾರ್ಮಿಕತೆ, ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದ ಅಂದಿನ ಬಿಜೆಪಿ ಸರಕಾರ ಗಣಿ ಮಾಫಿಯಾಕ್ಕೆ ಸಡ್ಡು ಹೊಡೆದು ದೇವಾಲಯ ಪುನರ್ ನಿರ್ಮಾಣಕ್ಕೆ ಸಹಕರಿಸಿಲ್ಲ. ನಂತರ ಅಂದಿನ ಆರ್.ಎಸ್.ಎಸ್ ಮುಖಂಡರಿಗೆ ಪತ್ರ ಬರೆದು ಸಮಸ್ಯೆ ವಿವರಿಸಿದ ನಂತರ ಸರಕಾರ ಎಚ್ಚೆತ್ತುಕೊಂಡ ಘಟನೆಯನ್ನು ಸ್ಮರಿಸಿದರು.


ದೇವಾಲಯಗಳ ವಾಸ್ತು ವಿನ್ಯಾಸ, ರಚನೆ ಮತ್ತು ಅಲಂಕಾರಿಕ ಕೆತ್ತನೆ ಬಗ್ಗೆ ಪ್ರಾಚೀನ ಭಾರತೀಯರ ನೈಪುಣ್ಯ ಕೌಶಲ್ಯ ಮತ್ತು ವಿಜ್ಞಾನ ಹಾಗೂ ಸೌಂದರ್ಯ ವಿಷಯದ ಬಗ್ಗೆ ಸುರೇಂದ್ರನಾಥ್ ಬೊಪ್ಪರಾಜು ಮಾತನಾಡಿದರು.


ಶತಮಾನೋತ್ಸವ ಪುರಸ್ಕಾರವನ್ನು ವಿಕ್ರಮ್ ಸಂಪತ್ ಅವರಿಗೆ ನೀಡಿ ಗೌರವಿಸಲಾಯಿತು.

Ads on article

Advertise in articles 1

advertising articles 2

Advertise under the article