-->
ಸರ್ಕಾರದಿಂದ ಸಣ್ಣ ಕೈಗಾರಿಕೆಗಳ ಉತ್ತೇಜನ

ಸರ್ಕಾರದಿಂದ ಸಣ್ಣ ಕೈಗಾರಿಕೆಗಳ ಉತ್ತೇಜನ

ಲೋಕಬಂಧು ನ್ಯೂಸ್
ಉಡುಪಿ, ಫೆ.27: ಸಣ್ಣ ಉದ್ದಿಮೆಗಳನ್ನು ಉತ್ತೇಜಿಸಲು ಸರ್ಕಾರ ಸದಾ ಬದ್ಧವಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಉದ್ದಿಮೆದಾರರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಂಯುಕ್ತ ಆಶ್ರಯದಲ್ಲಿ ಎಂ.ಎಸ್.ಎಂ.ಇ. ಕಾರ್ಯಕ್ಷಮತೆ‌ ವೃದ್ಧಿ ಮತ್ತು ವೇಗ (ಆರ್.ಎ.ಎಂ.ಪಿ) ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಇನ್ನಷ್ಟು ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ದೊರಕಿಸಲು ಮುಂದಾಗಬೇಕು. ಉದ್ಯಮಿಗಳಿಗೆ ಅಗತ್ಯ ಸಹಕಾರ ನೀಡಲು ಸರಕಾರ ಸಿದ್ಧವಾಗಿದೆ. ಕೈಗಾರಿಕೆಗಳಲ್ಲಿ ಉತ್ಪಾದಿಸುವ ವಸ್ತುಗಳ ಗುಣಮಟ್ಟದಲ್ಲಿ ದೋಷ ಇದ್ದಲ್ಲಿ ರಫ್ತು ಅಸಾಧ್ಯ. ಉತ್ಪಾದನೆ ಸಂದರ್ಭ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ತ್ಯಾಜ್ಯ ವಸ್ತುಗಳು ನದಿ, ಸಮುದ್ರ ಸೇರಿದಾಗ ಜಲಚರಗಳೊಂದಿಗೆ ಮನುಷ್ಯನಿಗೂ ಹಾನಿ ಉಂಟಾಗುತ್ತದೆ. ಅದನ್ನು ನಿಭಾಯಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನ ಲಭ್ಯತೆ ಕಡಿಮೆ ಇದೆ. ಸಣ್ಣ ಕೈಗಾರಿಕೆಗಳಿಗೆ ಭೂಮಿ ಪಡೆದವರು ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು.


ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ನಂದಿಕೂರು, ಬೆಳಪು, ಬೈಂದೂರಿನ ಸರ್ಕಾರಿ ಭೂಮಿ ಹಾಗೂ ಖಾಸಗಿ ವ್ಯಕ್ತಿಗಳ ಭೂಮಿಯಲ್ಲಿ ಹೊಸ ಕೈಗಾರಿಕೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.


ಜಿಲ್ಲೆಯಲ್ಲಿ ಸುಮಾರು 12,500 ಸಣ್ಣ ಕೈಗಾರಿಕೆಗಳು, 47-50 ಮಧ್ಯಮ ಕೈಗಾರಿಕೆಗಳು ಹಾಗೂ 7 ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 1.32 ಲಕ್ಷ ಜನ ಎಂ.ಎಸ್.ಎಂ.ಇ.ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿರುವ ವಿವಿಧ ಸಮಿತಿಗಳ ಸಭೆಗಳನ್ನು ನಿರಂತರವಾಗಿ ನಡೆಸುವುದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.


ಜಿಲ್ಲೆಯ ಸುಶಿಕ್ಷಿತ ಯುವಜನತೆ ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರಿಗೆ ಇಲ್ಲಿಯೇ ಉದ್ಯೋಗಾವಕಾಶ ದೊರೆತಲ್ಲಿ ಕುಟುಂಬದವರೊಂದಿಗೆ ಇಲ್ಲಿಯೇ ನೆಲೆ ಕಂಡುಕೊಳ್ಳುತ್ತಾರೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಈಚೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಖಾತಾ ಸಣ್ಣ ಕೈಗಾರಿಕೆಗಳಿಗೆ ವ್ಯವಹರಿಸಲು ತೊಂದರೆಯನ್ನುಂಟುಮಾಡಿದೆ. ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾಗಳಿಲ್ಲದೇ ಯಾವುದೇ ನೋಂದಣಿ, ಮರು ನೋಂದಣಿ ಮತ್ತಿತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ.


ಸಣ್ಣ ಕೈಗಾರಿಕೆಗಳಿಗೆ ಅಗತ್ಯವಿರುವ ನಿವೇಶನದ ಕೊರತೆ, ಹಾಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಗ್ರಾಚ್ಯುಟಿ, ಕನಿಷ್ಟ ವೇತನ ಜಾರಿಯ ಮರು ಪರಿಶೀಲನೆ ಸೇರಿದಂತೆ ಅನೇಕ ಸಮಸ್ಯೆಗಳು ಸಣ್ಣ ಕೈಗಾರಿಕೋದ್ಯಮಗಳಿಗೆ ಇವೆ. ಅವುಗಳನ್ನು ಆದ್ಯತೆಯ ಮೇಲೆ ಪರಿಹರಿಸಿಕೊಡಬೇಕು ಎಂದರು.


ರಫ್ತು ಕುರಿತು ಸತೀಶ್ ಕೋಟ, ಝಡ್.ಇ.ಡಿ ಯೋಜನೆ ಕುರಿತು ರೇಣುಕಾ ಹಾಗೂ ಲೀನ್ ಯೋಜನೆ ಕುರಿತು ಡಾ. ಎಸ್.ಎಂ ಜಗದೀಶ್ ಉಪನ್ಯಾಸ ನೀಡಿದರು.


ಕಾರ್ಯಾಗಾರದಲ್ಲಿ ಐ.ಇ.ಡಿ.ಎಸ್ ಜಂಟಿ ನಿರ್ದೇಶಕ ಡಾ.ಕೆ.ಸೊಕ್ರಾಟಿಸ್, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್, ವಿ.ಟಿ.ಪಿ.ಸಿ ಮಂಗಳೂರು ವಿಭಾಗದ ಉಪ ನಿರ್ದೇಶಕ ಮಂಜುನಾಥ ಹೆಗಡೆ, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್ ಬಿ.ಆರ್, ಖಜಾಂಚಿ ಮಂಜುನಾಥ್ ಎಚ್. ಉಪಸ್ಥಿತರಿದ್ದರು.


ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್ ನಿರೂಪಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article