-->
ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ಸರ್ವಜ್ಞ

ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ಸರ್ವಜ್ಞ

ಲೋಕಬಂಧು ನ್ಯೂಸ್
ಉಡುಪಿ, ಫೆ.21: ಸರ್ವಜ್ಞ ಕವಿ ತನ್ನ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದರು ಎಂದು  ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.ಕಡಿಯಾಳಿ ಯು.ಕಮಲಾಬಾಯಿ ಪ್ರೌಢಶಾಲೆ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಉಡುಪಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞನ ವಚನಗಳು ಅರ್ಥಪೂರ್ಣವಾಗಿದ್ದು, ಪ್ರತಿಯೊಬ್ಬರೂ ಅವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿನ ಮೂಡನಂಬಿಕೆ, ಜಾತಿ ವ್ಯವಸ್ಥೆ, ಢಾಂಬಿಕ ಭಕ್ತಿಯನ್ನು ಅವರು ಕಟುವಾಗಿ ಖಂಡಿಸಿದ್ದರು ಎಂದರು.


ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ ದೇಶದ ಏಳಿಗೆಯಲ್ಲಿ ದಾರ್ಶನಿಕರು, ಸಾಹಿತಿಗಳು ಹಾಗೂ ಕವಿಗಳ ಸೇವೆ ಅಪಾರವಾಗಿದ್ದು, ಅವರ  ಸಾಧನೆಗಳನ್ನು ತಿಳಿದುಕೊಂಡು ಅವರ ಧ್ಯೇಯೋದ್ದೇಶಗಳನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು. ಸಮಾಜ, ನಾಡಿಗೆ ಉತ್ತಮ ಕೊಡುಗೆ ನೀಡುವಲ್ಲಿ ಅವರು ನೀಡುವ ಪ್ರೇರಣೆ ನಮ್ಮ ಬದುಕಿನ ಸಾಧನೆಗೆ ಹೊಸ ಮುನ್ನುಡಿಯಾಗಲಿ ಎಂದರು.


ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್ ಉಪನ್ಯಾಸ ನೀಡಿ, ತ್ರಿಪದಿಯ ಬ್ರಹ್ಮ ಎಂದು ಕರೆಯಲ್ಪಡುವ ಸರ್ವಜ್ಞ, ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಸರಳವಾಗಿ ಜನರಿಗೆ ಬೋಧಿಸಿದರು. ಸಮಾಜದಲ್ಲಿನ ಜಾತಿ ಪದ್ಧತಿಯನ್ನು ವಿರೋಧಿಸಿದ ಅವರು, ತಮ್ಮ ವಚನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಜೊತೆಗೆ ದಾನಗಳ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಶ್ರಮಿಸಿದ್ದರು ಎಂದರು.


ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ್ ಕವಿ ಸರ್ವಜ್ಞ ಕುರಿತು ಮಾತನಾಡಿದರು.


ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಗಣಪತಿ, ಸರಕಾರದ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಲಾಲ್ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ತೇಜಸ್ ವಿ. ಬಂಗೇರ ನಿರೂಪಿಸಿದರು. ಕಡಿಯಾಳಿ ಯು.ಕಮಲಾಬಾಯಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್ ವಂದಿಸಿದರು.

Ads on article

Advertise in articles 1

advertising articles 2

Advertise under the article