-->
ಶಿವಾಜಿಯ ಜೀವನ ತತ್ವಾದರ್ಶ ಮಾದರಿ

ಶಿವಾಜಿಯ ಜೀವನ ತತ್ವಾದರ್ಶ ಮಾದರಿ

ಲೋಕಬಂಧು ನ್ಯೂಸ್
ಉಡುಪಿ, ಫೆ.21: ಛತ್ರಪತಿ ಶಿವಾಜಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ತತ್ವಗಳು ಎಲ್ಲರಿಗೂ ಮಾದರಿಯಾಗಬೇಕು ಹಾಗೂ ಅವರ ಜೀವನ ಚರಿತ್ರೆ, ಆಚಾರ ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಶಾಸಕ ಯಶಪಾಲ್ ಎ. ಸುವರ್ಣ ಹೇಳಿದರು.ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶಿವಾಜಿ ಪ್ರತಿಮೆ
ಶಿವಾಜಿಯ ಜೀವನ ಚರಿತ್ರೆಯನ್ನು ಅವಲೋಕಿಸಿ ಇತಿಹಾಸಕ್ಕೆ ನೀಡಿದ ಅವರ ಕೊಡುಗೆಗಳು, ವ್ಯಕ್ತಿತ್ವ ಗುಣಗಳನ್ನು ಅರಿತುಕೊಳ್ಳಬೇಕು.


ದೇಶದಲ್ಲೇ ಉತ್ತಮ ಆಡಳಿತ ನೀಡಿದ ಹಿಂದೂ ಮಹಾಕ್ರಾಂತಿಕಾರಿ ಶಿವಾಜಿ ಜಯಂತಿಗೆ ಅರ್ಥಪೂರ್ಣ ಮಹತ್ವ ದೊರೆಯಬೇಕು ಎಂದ ಅವರು, ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ವಿ. ನಾಯಕ್ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ ಧೀಮಂತ ನಾಯಕ ಹಾಗೂ ಶಿವಾಜಿಯ ಜಾಣ್ಮೆ ತನ್ನ ಆಡಳಿತಕ್ಕೆ ಪ್ರಮುಖವಾಗಿತ್ತು. ಜೀವನಕ್ಕೆ ಉತ್ತಮ ದಾರಿಗಳನ್ನು ಹುಡುಕುವ ಮುಂಚೆ ಸಂಕೋಚವನ್ನು ಬಿಡಬೇಕು ಹಾಗೂ ತಂದೆ, ತಾಯಿ ಮತ್ತು ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.


ಲೇಖಕ ಮತ್ತು ಕಥೆಗಾರ ಮಂಜುನಾಥ ಹಿಲಿಯಾಣ ಉಪನ್ಯಾಸ ನೀಡಿ, ಶಿವಾಜಿಯ ಶ್ರದ್ಧೆ ಮತ್ತು ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು. ಅವರ ಆದರ್ಶ ಜೀವನದ ಮೌಲ್ಯಗಳನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಇತಿಹಾಸಕ್ಕೆ ಶಿವಾಜಿ ನೀಡಿದ ಕೊಡುಗೆಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.


ಇದೇ ಸಂದರ್ಭದಲ್ಲಿ ಸಮುದಾಯದ ವತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಮೃದ್ಧಿ ಆರ್. ಅವರನ್ನು ಸನ್ಮಾನಿಸಲಾಯಿತು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ತೇಜಸ್ ಬಂಗೇರ ನಿರೂಪಿಸಿದರು. ಕಾಲೇಜಿನ ಹಿರಿಯ ಶಿಕ್ಷಕ ಸತೀಶ್ ಭಟ್ ವಂದಿಸಿದರು.

Ads on article

Advertise in articles 1

advertising articles 2

Advertise under the article