ಏ.9ರಿಂದ 13: ಪೆರ್ಣಂಕಿಲ ದೇವಸ್ಥಾನದಲ್ಲಿ ಭಕ್ತಿ ಸಿದ್ಧಾಂತೋತ್ಸವ
Monday, March 31, 2025
ಲೋಕಬಂಧು ನ್ಯೂಸ್
ಉಡುಪಿ: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೇಜಾವರ ಮಠ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ, ಅಖಿಲ ಭಾರತ ಮಾಧ್ವ ಮಹಾ ಮಂಡಲ ಆಶ್ರಯದಲ್ಲಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾನಿಲಯ, ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಿತ ಅನೇಕ ಸಂಘಟನೆಗಳ ಸಹಯೋಗದಲ್ಲಿ ಏಪ್ರಿಲ್ 9ರಿಂದ 13ರ ವರೆಗೆ 30ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ, ಭಕ್ತಿ ಸಿದ್ಧಾಂತೋತ್ಸವ ಹಾಗೂ ಶ್ರೀರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಕ್ತಿ ಸಿದ್ಧಾಂತೋತ್ಸವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಏ.9ರಂದು ಸಂಜೆ 6 ಗಂಟೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಮಾರಂಭದ ಉದ್ಘಾಟನೆ ನಡೆಯಲಿದೆ.
ಏ.10ರಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಗುರುಕುಲ ಮಾದರಿಯಲ್ಲಿ 13 ವರ್ಷ ಕಾಲ ಶಾಸ್ತ್ರಾಧ್ಯಯನ ಪೂರೈಸಿದ ವಿದ್ಯಾರ್ಥಿಗಳ ನ್ಯಾಯಸುಧಾ ಮಂಗಲೋತ್ಸವ ನಡೆಯಲಿದೆ. ಏ.11 ಮತ್ತು 12ರಂದು ನಡೆಯುವ ಮಾಧ್ವ ತತ್ವಜ್ಞಾನ ಸಮ್ಮೇಳನದಲ್ಲಿ ಸುಮಾರು 1,800ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸುತ್ತಿದ್ದಾರೆ.
ವಿದ್ವತ್ ಗೋಷ್ಠಿಗಳು, ಮಹಿಳಾ ಗೋಷ್ಠಿ, ಸಂಗೀತ ಗೋಷ್ಠಿ, ಯುವಗೋಷ್ಠಿಗಳು ನಡೆಯಲಿವೆ. ಆಧ್ಯಾತ್ಮಿಕ ಪುಸ್ತಕ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನೂ ಸಂಯೋಜಿಸಲಾಗಿದೆ. ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟಿನ ನೂರಾರು ಭಜನಾ ಮಂಡಳಿಗಳ 2,500ಕ್ಕೂ ಅಧಿಕ ಮಾತೆಯರಿಂದ ಹರಿನಾಮ ಸಂಕೀರ್ತನೋತ್ಸವ ನಡೆಯಲಿದೆ.
ಏ.13ರಂದು ಸಾಯಂಕಾಲ 3.30ರಿಂದ 6ರ ವರೆಗೆ ಸಂತ ಸಂಗಮದಲ್ಲಿ ನಾಡಿನ 20ಕ್ಕೂ ಅಧಿಕ ಮಠಾಧೀಶರು ಸಾಧು ಸಂತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೂವರು ಸಮ್ಮೇಳನಾಧ್ಯಕ್ಷರು
ತತ್ವಜ್ಞಾನ ಸಮ್ಮೇಳನಾಧ್ಯಕ್ಷರಾಗಿ ಕುಂಭಾಸಿ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಚೆನ್ನೈನ ಪ್ರಸಿದ್ಧ ಹೋಟೆಲ್ ಉದ್ಯಮಿ ಕೆ. ರಾಮಪ್ರಸಾದ್ ಭಟ್ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದ ಹಳೆ ವಿದ್ಯಾರ್ಥಿ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ಟ ಅವರನ್ನು ನಿಯೋಜಿಸಲಾಗಿದೆ ಎಂದರು.
ವಿದ್ವಾನ್ ಡಾ. ಸಗ್ರಿ ಆನಂದತೀರ್ಥಾಚಾರ್ಯ ಮಾತನಾಡಿ, ಕಾರ್ಯಕ್ರಮದಲ್ಲಿ ಚತುರ್ವೇದ ರಾಮಾಯಣ ಮಹಾಭಾರತ, ಭಾಗವತ ಪಾರಾಯಣ, ಗಣಪತಿ ದೇವರಿಗೆ ಗಣಯಾಗ, ಕೊಪ್ಪರಿಗೆ ಅಪ್ಪಸೇವೆ, ಸಮಾಜದಲ್ಲಿನ ಅಪಮತ್ಯು ಅಕಾಲ ಮತ್ಯು ಕಂಟಕಗಳ ನಿವಾರಣೆಗಾಗಿ ಪ್ರಾರ್ಥಿಸಿ ಮನ್ಯುಸೂಕ್ತ ಯಾಗ, ಮಹಾಮೃತ್ಯುಂಜಯ ಯಾಗ, ಗೋವಂಶ ರಕ್ಷಣೆಗಾಗಿ ಇತ್ತೀಚೆಗೆ ಶ್ರೀಗಳ ಮಾರ್ಗದರ್ಶನದಂತೆ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಸಮರ್ಪಣಾಂಗ ಲಕ್ಷ ವಿಷ್ಣು ಸಹಸ್ರನಾಮ ಯಾಗ, ಗೋಸೂಕ್ತ ಯಾಗ, 40 ಸಾವಿರಕ್ಕೂ ಅಧಿಕ ರಾಮ ಭಕ್ತರಿಂದ ನಡೆಯುತ್ತಿರುವ ದಶಕೋಟಿ ರಾಮ ತಾರಕ ಮಂತ್ರ ಜಪಯಜ್ಞ ಸಮರ್ಪಣಾಂಗ ಬಹತ್ ರಾಮ ತಾರಕ ಮಂತ್ರ ಯಾಗಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್, ಸಮಿತಿ ಪದಾಧಿಕಾರಿಗಳಾದ ಸಗ್ರಿ ಅನಂತ ಸಾಮಗ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಕೆ. ರಾಮಚಂದ್ರ ಉಪಾಧ್ಯಾಯ, ಪೆರ್ಣಂಕಿಲ ದೇವಸ್ಥಾನದ ಮುಖ್ಯ ವ್ಯವಸ್ಥಾಪಕ ವಿಷ್ಣುಮೂರ್ತಿ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರಿದ್ದರು.
ಉಡುಪಿ ಪೇಜಾವರ ಮಠದಲ್ಲಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾದುಕಾ ಸನ್ನಿಧಿಯಲ್ಲಿ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಹಾಗೂ ಇತರರು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.