.jpg)
ಪರೀಕ ಸೌಖ್ಯವನ ಬ್ರಹ್ಮಕಲಶೋತ್ಸವಕ್ಕೆ ಚಾಲನೆ
Monday, March 3, 2025
ಲೋಕಬಂಧು ನ್ಯೂಸ್
ಹಿರಿಯಡಕ: ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೊಳಪಟ್ಟಿರುವ ಪರೀಕ ಸೌಖ್ಯವನ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ಹಾಗೂ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ಮಾರ್ಚ್ 6ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ನಾಂದಿ- ಪುಣ್ಯಾಹ, ಪಂಚಗವ್ಯ, ಅರಣಿ ಮಥನ, ಭದ್ರದೀಪ ಪ್ರತಿಷ್ಠೆ ತರುವಾಯ ಅಥರ್ವಶೀರ್ಷ ಮಹಾಗಣಪತಿ ಹವನ ನಡೆಸಲಾಯಿತು.
ಋತ್ವಿಜರಿಂದ ಆದ್ಯ ಗಣಪತಿ ಹೋಮ, ಮೃತ್ಯುಂಜಯ ಹೋಮ ನಡೆಯಿತು. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಸೌಖ್ಯವನ ವ್ಯವಸ್ಥಾಪಕ ಪ್ರವೀಣ ಕುಮಾರ್ ಮೊದಲಾದವರಿದ್ದರು.
ಸಂಜೆ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಮಹಾಸುದರ್ಶನ ಹೋಮ, ಅಘೋರ ಹೋಮ, ವಾಸ್ತುಹೋಮ, ವಾಸ್ತುಪೂಜೆ ಬಲಿ, ಪ್ರಾಕಾರ ಬಲಿ ನಡೆಯಿತು.
ಇದೇ ಸಂದರ್ಭದಲ್ಲಿ ಪ್ರಕೃತಿ ಚಿಕಿತ್ಸಾ ಸ್ವಾಸ್ಥ್ಯ ಸಂಜೀವಿನಿ ಮತ್ತು ಪೌಷ್ಠಿಕ ಪರ್ವ ಆಹಾರ ಮೇಳವನ್ನು ಡಾ. ಹರ್ಷೇಂದ್ರಕುಮಾರ್ ಉದ್ಘಾಟಿಸಿದರು. ಸೌಖ್ಯವನ ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ, ಡಾ.ಶೋಭಿತ್ ಶೆಟ್ಟಿ, ಡಾ. ಪೂಜಾ ಮೊದಲಾದವರಿದ್ದರು.
ಸ್ಥಳೀಯ ಭಜನಾ ಮಂಡಳಿಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪಿ.ನಿತ್ಯಾನಂದ ರಾವ್ ನೇತೃತ್ವದ ಮಣಿಕೃಷ್ಣಸ್ವಾಮಿ ಅಕಾಡೆಮಿಯವರಿಂದ ಶ್ರೀಕ್ಷೇತ್ರ ಧರ್ಮಸ್ಥಳ ಸಂಬಂಧಿ ಕೃತಿಗಳ ಮಂಜುನಾದ ಹಾಗೂ ಶ್ರೀ ಧರ್ಮಸ್ಥಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳಿಂದ ಕಲಾವೈಭವ ನಡೆಯಿತು.