-->
ರೇಣುಕಾಚಾರ್ಯರ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ

ರೇಣುಕಾಚಾರ್ಯರ ಜೀವನ ಮೌಲ್ಯ ಅಳವಡಿಸಿಕೊಳ್ಳಲು ಕರೆ

ಲೋಕಬಂಧು ನ್ಯೂಸ್
ಉಡುಪಿ: ರೇಣುಕಾಚಾರ್ಯರ ಜೀವನ ಮೌಲ್ಯಗಳನ್ನು ಅರಿತುಕೊಂಡು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸುತ್ತಮತ್ತಲಿನ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಉದ್ಘಾಟಿಸಿ, ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ನಾವು ನಮ್ಮಷ್ಟಕ್ಕೇ ಬದುಕದೇ ಪರರ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಜೀವಿಸುವ ಮನೋಭಾವನೆ ಹೊಂದಿರಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಬೇಕೆಂದರೆ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು.
12ನೇ ಶತಮಾನದಲ್ಲಿ ಶರಣರು ಭಕ್ತಿ ಮತ್ತು ಜ್ಞಾನದ ಸಂಪಾದನೆಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿ ತಮ್ಮ ವಿಚಾರಗಳನ್ನು ವಚನಗಳ ಮೂಲಕ ಜನರಿಗೆ ಜೀವನದ ಸಂದೇಶ ಸಾರುತ್ತಿದ್ದರು ಎಂದರು.


ಯಶಸ್ಸು ಕಾಣಬೇಕಾದರೆ ಮೊದಲು ಮನಸ್ಥಿತಿಯನ್ನು ಬದಲಾಯಿಸಿಕೊಂಡು ನಂತರ ಜ್ಞಾನ ಸಂಪಾದಿಸಿಕೊಳ್ಳಬೇಕು. ಶರಣರ ಪುಸ್ತಕಗಳನ್ನು, ವಚನಗಳನ್ನು ಹೆಚ್ಚಾಗಿ ಓದಿಕೊಂಡು ಮನದಟ್ಟು ಮಾಡಿಕೊಂಡರೆ ನಮ್ಮ ಮನಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಬಹುದು ಎಂದರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿರಂಜನ ಯು.ಸಿ, ರೇಣುಕಾಚಾರ್ಯ ನಡೆದು ಬಂದ ಜೀವನದ ಹಾದಿ, ಅವರ ವ್ಯಕ್ತಿತ್ವ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ನಿತ್ಯಾನಂದ ವಿ.ಗಾಂವ್ಕರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿದ್ದ ಶರಣರು ಹಾಗೂ ಮಹಾನುಭಾವರ ಕೊಡುಗೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಪ್ರೇರಣೆಯಾಗಿಟ್ಟುಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಬಹುದು ಹಾಗೂ ಬದುಕು ಕಟ್ಟಿಕೊಳ್ಳಬಹುದು ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಸರಿತಾ ನಿರೂಪಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ವಂದಿಸಿದರು.

Ads on article

Advertise in articles 1

advertising articles 2

Advertise under the article