ದಿವ್ಯಾಂಗರು ಸಮಾಜಕ್ಕೆ ಹೊರೆಯಲ್ಲ
Friday, March 14, 2025
ಲೋಕಬಂಧು ನ್ಯೂಸ್
ಉಡುಪಿ: ದಿವ್ಯಾಂಗ ವ್ಯಕ್ತಿಗಳು ಎಂದೂ ಸಮಾಜಕ್ಕೆ ಹೊರೆಯಲ್ಲ. ಅವರಲ್ಲೂ ಉತ್ತಮ ಪ್ರತಿಭೆಗಳಿದ್ದು ಅದಕ್ಕೆ ಸೂಕ್ತ ಪ್ರೋತ್ಸಾಹ ಲಭಿಸಿದಾಗ ಅಂಥ ವ್ಯಕ್ತಿಗಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಿವ್ಯಾಂಗರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಉಡುಪಿ ಬಿಷಪ್ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಟುಂಬ ಆಯೋಗ ವತಿಯಿಂದ ಆಯೋಜಿಸಿದ್ದ ದಿವ್ಯಾಂಗರ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ದಿವ್ಯಾಂಗರಿಗೆ ಮಾನಸಿಕ ಸ್ಥೈರ್ಯ ತುಂಬಲು ಈಗಾಗಲೇ ಪೋಪ್ ಫ್ರಾನ್ಸಿಸ್ ಜಗತ್ತಿಗೆ ಕರೆ ನೀಡಿದ್ದಾರೆ. ಧರ್ಮಪ್ರಾಂತ್ಯ ಮಟ್ಟದಲ್ಲಿ ದಿವ್ಯಾಂಗ ಮಕ್ಕಳಿಗೂ ಉತ್ತಮ ಶಿಕ್ಷಣ ಪಡೆಯಲು ಹಾಗೂ ದಿವ್ಯಾಂಗರಿಗೆ ಸರಕಾರದಿಂದ ಲಭಿಸುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪಡೆ ರಚಿಸಲಾಗಿದ್ದು,ಆ ಮೂಲಕ ದಿವ್ಯಾಂಗರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದಕುವ ವ್ಯವಸ್ಥೆ ಆಗಬೇಕಾಗಿದೆ ಎಂದರು.
ಎಮ್.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವಕಾಶ ಕಲ್ಪಿಸಿಕೊಟ್ಟರೆ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸುತ್ತಾರೆ. ಆದರೆ, ಪ್ರೋತ್ಸಾಹ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಅವರಲ್ಲಿರುವ ಪ್ರತಿಭೆ ನಾಶ ಹೊಂದುತ್ತಿದೆ. ವಿಶೇಷ ಅಗತ್ಯತೆಯುಳ್ಳವರು ನಮ್ಮೊಳಗೆ ಒಬ್ಬರು ಎಂಬ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಂವೇದನಾಶೀಲತೆ ಗುಣದಿಂದ ಮಾತ್ರ ಅಂಥತವರ ಏಳಿಗೆ ಸಾಧ್ಯ. ದಿವ್ಯಾಂಗರ ಏಳಿಗೆಗೆ ತಮ್ಮ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
ದಿವ್ಯಾಂಗರಿಂದ ಸನ್ಮಾನ
75ನೇ ಹುಟ್ಟುಹಬ್ಬ ಹಾಗೂ ಧರ್ಮಾಧ್ಯಕ್ಷರಾಗಿ 25 ವರ್ಷ ಪೂರೈಸಿದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ದಿವ್ಯಾಂಗರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ದಿವ್ಯಾಂಗರಿಗೆ ಧರ್ಮಾಧ್ಯಕ್ಷರು ಹಾಗೂ ಇತರ ಧರ್ಮಗುರುಗಳು ಶಾಲು ಹೊದಿಸಿ, ಗೌರವ ಕಾಣಿಕೆ ನೀಡಿ ಸನ್ಮಾನಿಸಿದರು.
ಮಾನಸ ವಿಶೇಷ ಶಾಲೆಯ ಮಕ್ಕಳು ಹಾಗೂ ತೊಟ್ಟಂ ಚರ್ಚ್'ನ ಯುವಜನರು ತಮ್ಮ ನೃತ್ಯಗಳ ಮೂಲಕ, ವಂ.ಡೆನಿಸ್ ಡೆಸಾ ಗಾಯನದ ಮೂಲಕ ದಿವ್ಯಾಂಗರಿಗೆ ಹುರುಪು ಮೂಡಿಸಿದರು.
ಕರ್ನಾಟಕ ಪ್ರಾಂತೀಯ ದಿವ್ಯಾಂಗರ ಆಯೋಗದ ಕಾರ್ಯದರ್ಶಿ ಎಸ್ತೆರ್ ಡಿ'ಸೋಜಾ, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ಹಾಗೂ ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ, ಕುಟುಂಬ ಆಯೋಗದ ನಿರ್ದೇಶಕ ವಂ.ಡಾ.ರೋಶನ್ ಡಿ'ಸೋಜಾ, ಸಂಯೋಜಕಿ ಸಿಸ್ಟರ್ ವಿನ್ನಿ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಆರೋಗ್ಯ ಆಯೋಗದ ನಿರ್ದೇಶಕ ಡಾ.ಎಡ್ವರ್ಡ್ ಲೋಬೊ, ಬೈಬಲ್ ಆಯೋಗದ ನಿರ್ದೇಶಕ ವಂ.ಸಿರಿಲ್ ಲೋಬೊ, ಉಜ್ವಾಡ್ ಪತ್ರಿಕೆ ಸಂಪಾದಕ ವಂ. ಆಲ್ವಿನ್ ಉಪಸ್ಥಿತರಿದ್ದರು.
ಕುಟುಂಬ ಆಯೋಗದ ನಿರ್ದೇಶಕಿ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.