
ಕಾಲ್ನಡಿಗೆಯಲ್ಲೇ ಸಂಸದರ ಪ್ರಗತಿ ಪರಿಶೀಲನೆ!
Monday, March 3, 2025
ಲೋಕಬಂಧು ನ್ಯೂಸ್
ಉಡುಪಿ: ವಿಪರೀತ ಬಿಸಿಲಿನ ತಾಪದ ನಡುವೆಯೇ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಮಲ್ಪೆಯಿಂದ ಕರಾವಳಿ ಬೈಪಾಸ್ ವರೆಗೆ ಸುಮಾರು 4 ಕಿ.ಮೀ ಕಾಲ್ನಡಿಗೆ ಮೂಲಕ ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ವೀಕ್ಷಿಸಿದರು.
ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಮಲ್ಪೆ- ಆಗುಂಬೆ ಚತುಷ್ಪಥ ಕಾಮಗಾರಿ ಕಳೆದ ಕೆಲವು ಸಮಯದಿಂದ ಪ್ರಗತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಕೆಲವೊಂದು ಕಾರಣಗಳಿಂದ ತಡೆಬಿದ್ದಿದೆ. ಈ ಸಂಬಂಧ ಸಾರ್ವಜನಿಕರಿಂದಲೂ ಕಾಮಗಾರಿಗೆ ವೇಗ ನೀಡಲು ಒತ್ತಡ ಕೇಳಿಬರುತ್ತಿತ್ತು. ಜೊತೆಗೆ ಮಲ್ಪೆ ಮೀನುಗಾರಿಕೆ ಬಂದರಿಗೆ ತೆರಳುವವರಿಗೆ, ಪ್ರವಾಸಿಗರಿಗೆ ಸಾಕಷ್ಟು ತೊಂದರೆ ಉಂಟಾದ ಹಿನ್ನಲೆಯಲ್ಲಿ ಸಂಸದ ಕೋಟ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು, ಮಲ್ಪೆಯಿಂದ ಕರಾವಳಿ ಬೈಪಾಸ್ ರಸ್ತೆಯಲ್ಲಿ ಸುಮಾರು 500 ಮೀ. ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದೆ. 227 ಪ್ರಕರಣ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿದೆ. ಅದರಲ್ಲಿ 133 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 25 ಪ್ರಕರಣಗಳಿಗೆ ಮುಂದಿನ ಶುಕ್ರವಾರದೊಳಗೆ ಪರಿಹಾರ ನೀಡಲಾಗುವುದು. ಸುಮಾರು 40 ಪ್ರಕರಣಗಳು ಮಹಜರು ನಡೆಸಲಾಗಿದ್ದು, ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.
ಮಾ.4ರಂದು ಕಾಮಗಾರಿ ಆರಂಭ
ಮಾರ್ಚ್ 4ರಂದು ಮಲ್ಪೆಯ ಮೊಗವೀರ ಸಭಾಭವನದಿಂದ ಕಲ್ಮಾಡಿ ವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕಡೆಗಳಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲಿಯಾದರೂ ಸಮಸ್ಯೆ ಉಂಟಾದಲ್ಲಿ ಕಾನೂನು ಪ್ರಕಾರ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಸೂಕ್ತ ಪರಿಹಾರ ನೀಡಲು ಯತ್ನ
ಪ್ರಸ್ತುತ ಈ ಪರಿಸರದಲ್ಲಿ ಪ್ರತೀ ಸೆಂಟ್ಸ್'ಗೆ 7ರಿಂದ 8 ಲಕ್ಷ ರೂ.ವರೆಗೆ ಬೆಲೆ ಬಾಳುತ್ತಿದೆ. ಸರಕಾರ ನಿಗದಿಪಡಿಸಿದ 1 ಲಕ್ಷ ರೂ. ಪರಿಹಾರವನ್ನು ಹೇಗೆ ಪಡೆದುಕೊಳ್ಳುವುದು ಎಂಬ ಬಗ್ಗೆ ಭೂ ಮಾಲಕರು ಅವಲತ್ತುಕೊಂಡು, ಗರಿಷ್ಠ ಪರಿಹಾರ ದೊರಕಿಸಿಕೊಡಬೇಕು ಆಗ್ರಹಿಸಿದರು.
ಅದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಹೆಚ್ಚಿನ ಪರಿಹಾರ ದೊರಕಿಸಿಕೊಡಲು ನಾನು ಮತ್ತು ಶಾಸಕ ಯಶಪಾಲ್ ಸುವರ್ಣ ಪ್ರಯತ್ನಿಸುತ್ತೇವೆ. ಅದಕ್ಕೆ 99 ಶೇ. ಭೂ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್, ಗುತ್ತಿಗೆದಾರ, ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.