-->
ಜಾತಿ ನಿಂದನೆ ಕೇಸು ಹಿಂಪಡೆಯಲು ಆಗ್ರಹ

ಜಾತಿ ನಿಂದನೆ ಕೇಸು ಹಿಂಪಡೆಯಲು ಆಗ್ರಹ

ಲೋಕಬಂಧು ನ್ಯೂಸ್
ಉಡುಪಿ: ಮೀನು ಕದ್ದ ಆರೋಪ ಹಿನ್ನೆಲೆಯಲ್ಲಿ ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣ ದುರದೃಷ್ಟಕರ. ಆದರೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯೇ ಆಗಿಲ್ಲವಾದರೂ ಮೀನುಗಾರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ. ಅದನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದರು.
ಮಲ್ಪೆ ಬಂದರಿನ ಮೀನುಗಾರರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಬಂಧಿತ ಮೀನುಗಾರರ ಬಿಡುಗಡೆಗೆ ಒತ್ತಾಯಿಸಿ ಮಲ್ಪೆ ಮೀನುಗಾರರ ಸಂಘ ಹಾಗೂ ಮಲ್ಪೆಯ ಸಮಸ್ತ ಮೀನುಗಾರರ ವತಿಯಿಂದ ಬಂದರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಎಸ್ಪಿಯನ್ನು ಅಮಾನತು ಮಾಡಿ
ಘಟನೆಯನ್ನು ಸರಕಾರ ಹಾಗೂ ಪೊಲೀಸ್ ಇಲಾಖೆ ನಡೆಸಿಕೊಂಡ ರೀತಿ ಒಪ್ಪಲು ಸಾಧ್ಯವಿಲ್ಲ. ಕಳ್ಳರನ್ನು ಸಾರ್ವಜನಿಕರ ಹಿಡಿದರೆ ಅವರು ಮೊದಲು ಥಳಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಜಿಲ್ಲಾ ಎಸ್ಪಿ ಮತ್ತು ಪೋಲಿಸ್ ಇಲಾಖೆ ಯಾವ ಆಧಾರದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಹೊಡೆಯುವಾಗ ಆಕೆ ದಲಿತೆ ಎಂದು ತಿಳಿದಿಲ್ಲ. ಮಲ್ಪೆ ಬಂದರಿನಲ್ಲಿ ಜಾತಿ ಆಧರಿಸಿ ಯಾರಿಗೂ ಕೆಲಸ ಕೊಟ್ಟಿಲ್ಲ. ಜಾತಿ ನಿಂದನೆ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾನೂನು ಪಾಲನೆ ಮಾಡುವ ಎಸ್ಪಿ ಕಾನೂನಿಗೆ ಸರಿಯಾಗಿ ನಡೆದುಕೊಳ್ಳಬೇಕು. ಯಾರೋ ಫೋನ್ ಮಾಡಿ ಒತ್ತಡ ಹಾಕಿದ್ದಾರೆ ಎಂಬ ಕಾರಣಕ್ಕೆ ಹೀಗೆ ನಡೆದುಕೊಳ್ಳಬಾರದು. ಮಲ್ಪೆಯ ಇತಿಹಾಸವನ್ನು ನೆನಪಿಸಿಕೊಂಡರೆ ಡಿವೈಎಸ್ಪಿ ಜೀಪ್ ವಾಪಾಸು ಹೋಗಲು ಬಿಟ್ಟಿರಲಿಲ್ಲ. ಆದರೆ, ಅಂದು ಯಾರನ್ನೂ ಬಂಧಿಸುವ ಧೈರ್ಯ ಪೋಲಿಸ್ ಇಲಾಖೆಗೆ ಇರಲಿಲ್ಲ. ತನಿಖೆಗೆಂದು ಕರೆದು ಮೋಸದಿಂದ ಬಂಧಿಸಿದ್ದೀರಿ. ಕಾನೂನು ಬಾಹಿರವಾಗಿ ಅಮಾಯಕ ಹೆಣ್ಣು ಮಕ್ಕಳನ್ನು ಬಂಧಿಸಲಾಗಿದೆ ಎಂದು ಭಟ್ ಆರೋಪಿಸಿದರು.


ಠಾಣೆಯಲ್ಲಿ ರಾಜಿ ಆದ ಪ್ರಕರಣವನ್ನು ಯಾರದ್ದೋ ಒತ್ತಡಕ್ಕೆ ಮಣಿದು ಇಲಾಖೆ ಈ ರೀತಿಯ ಕ್ರಮ ಕೈಗೊಂಡಿರುವುದು ಸರಿಯಲ್ಲ. ಮೀನುಗಾರ ಮುಖಂಡರೊಂದಿಗೆ ಮಾತನಾಡಿ ಸರೆಂಡರ್ ಮಾಡಿಸಿಕೊಳ್ಳಬಹುದಿತ್ತು ಎಂದರು.


ಜಿಲ್ಲಾ ಎಸ್ಪಿಯಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ. ಇಬ್ಬರು ಪೋಲಿಸರು ಅಮಾನತು ಆಗಿದ್ದಾರೆ. ಯಾವ ಕಾರಣಕ್ಕೆ ಅಮಾನತು ಮಾಡಿದ್ದಾರೆ. ಘಟನೆಗೆ ಬೀಟ್ ಪೋಲಿಸ್ ಜವಾಬ್ದಾರಿ ಆಗುವುದಾದರೆ ಪಿಎಸ್.ಐ, ವೃತ್ತನಿರೀಕ್ಷಕ ಹಾಗೂ ಎಸ್ಪಿ ಕೂಡಾ ಜವಾಬ್ದಾರರಾಗುತ್ತಾರೆ. ಅವರನ್ನೂ ಅಮಾನತು ಮಾಡಬೇಕಾಗುತ್ತದೆ ಎಂದರು.


ಹಲ್ಲೆಗೊಳಗಾದ ಮಹಿಳೆಯೇ ಕೇಸ್ ಬೇಡವೆಂದರೂ ಏಕಾಏಕಿ ನಾಲ್ವರು ಮೀನುಗಾರರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು. ಇಲ್ಲದಿದ್ದರೆ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.


ಡ್ರಗ್ಸ್ ಕಂಟ್ರೋಲ್ ಮಾಡಲಾಗದ ಎಸ್ಪಿ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಪೆ ಬಂದರು ಲಕ್ಷಾಂತರ ಜನರಿಗೆ ಬಂಗಾರದ ಬಟ್ಟಲಾಗಿದೆ. ಇಲ್ಲಿ ದುಡಿದು ತಿನ್ನುವ ವರ್ಗವಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರಕಿದೆ. ಬಂದರಿನಲ್ಲಿ ನಡೆದ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಉದ್ದಾರ ಆಗಿದ್ದು ಮಲ್ಪೆ ಬಂದರಿನಿಂದ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇಲ್ಲಿ ಜಾತಿ, ಭೇದವಿಲ್ಲದೆ ಸೌಹಾರ್ದವಾಗಿ ಕೆಲಸ ನಡೆಯುತ್ತಿದೆ ಎಂದರು.
`ಈ ಜಿಲ್ಲೆಯಲ್ಲಿ ಅಣ್ಣಾಮಲೈ ಸೇರಿದಂತೆ ಅನೇಕ ದಕ್ಷ ಅಧಿಕಾರಿಗಳು ಎಸ್ಪಿಯಾಗಿ ಹೋಗಿದ್ದಾರೆ. ಆದರೆ, ಅವರೆಂದಿಗೂ ಮಾನವೀಯತೆ ಬಿಟ್ಟು ವರ್ತಿಸಿಲ್ಲ. ಇವನು ಯಾವ ಲೆಕ್ಕ? ಈ ಎಸ್ಪಿಗೆ ಮನುಷ್ಯತ್ವವೇ ಇಲ್ಲ. ಅಮಾಯಕ ಮೀನುಗಾರ ಮಹಿಳೆಯನ್ನು ಬಂಧಿಸುವ ದಾರ್ಷ್ಯ ತೋರಿಸುವ ಎಸ್ಪಿ ನಮಗೆ ಬೇಡ. ಅವನನ್ನು ವರ್ಗಾವಣೆ ಮಾಡಬೇಕು' ಎಂದು ಎಸ್.ಪಿ. ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು.
ಇವನೊಬ್ಬ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವವನು. ಈಗಾಗಲೇ ಜಿಲ್ಲೆಯಲ್ಲಿ ಅಮಾಯಕ ಸುಮಾರು 62 ಜನ ಪೋಲಿಸ್ ಕಾನ್'ಸ್ಟೇಬಲ್'ಗಳನ್ನು ಅಮಾನತು ಮಾಡಿದ್ದಾನೆ. ಇವನು ಉಡುಪಿಗೆ ಬಂದಾಗ ಆತನಿಗೆ, ಇಲ್ಲಿನ ಸಂಪ್ರದಾಯವಾದ ಕೋಳಿ ಅಂಕ ಸೇರಿದಂತೆ ಸಾಂಸ್ಕೃತಿಕ ವಿಚಾರಕ್ಕೆ ಅಡಚಣೆ ಮಾಡಬೇಡ ಎಂದಿದ್ದೆ. ಬ್ರಿಟಿಷರು ಬಿಟ್ಟರೂ ಈತ ಬಿಡಲಿಲ್ಲ ಎಂದರು.


ಕಳ್ಳರನ್ನು, ಅನಾಚಾರ ಮಾಡಿದವರನ್ನು ಮೊದಲು ಹಿಡಿಯಬೇಕು. ಜಿಲ್ಲೆಯಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಲು ಸಾಧ್ಯವಾಗದ ಎಸ್ಪಿ, ಮೀನುಗಾರ ಮಹಿಳೆಯರನ್ನು ಬಂಧಿಸಿ ಪೌರುಷ ತೋರಿಸುವುದೇ? ನೀನು ಬೇರೆ ಯಾವ ರಾಜ್ಯಕ್ಕಾದರೂ ಹೋಗು, ಇಲ್ಲಿಗೆ ಅಗತ್ಯವಿಲ್ಲ ಎಂದು ಗುಡುಗಿದರು.


ಕಳ್ಳರು ನುಗ್ಗಿದರೆ ಪೂಜೆ ಮಾಡುತ್ತೀರಾ?
ಜಿಲ್ಲಾ ಎಸ್.ಪಿ. ಮನೆಗೆ ಕಳ್ಳರು ನುಗ್ಗಿದ್ದರೆ ಏನು ಮಾಡುತ್ತೀರಿ? ಪೂಜೆ ಮಾಡುತ್ತೀರಾ ಎಸ್.ಪಿ.ಯವರೇ ಎಂದು ಪ್ರಶ್ನಿಸಿದ ಪ್ರಮೋದ್, ನಮ್ಮ ಮನೆಗೆ ಕಳ್ಳರು ಬಂದರೆ ಕಟ್ಟಿ ಹಾಕುವುದಿಲ್ಲವೇ? ಕಳ್ಳರನ್ನು ಕಟ್ಟಿ ಹಾಕದೆ ಮತ್ತೇನು ಮಾಡಬೇಕು. ಆದರೆ, ಕಳ್ಳತನದ ಆರೋಪವಿರುವ ಮಹಿಳೆಗೆ ತಲ್ವಾರು, ಖಡ್ಗದಿಂದ ಹಲ್ಲೆ ನಡೆಸಿದ್ದಾರಾ? ಮತ್ಯಾಕೆ ಪೋಲಿಸರು ಅಮಾಯಕ ಮೀನುಗಾರ ಮಹಿಳೆಯರ ಮೇಲೆ ಪೌರುಷ ತೋರಿಸಿರುವುದು ಎಂದು ಪ್ರಶ್ನಿಸಿದರು.


ಮೀನುಗಾರಿಕೆ, ಬಂದರಿನ ಬಗ್ಗೆ ಏನೆಂದೇ ತಿಳಿಯದವರು ಉಸ್ತುವಾರಿ ಮಂತ್ರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತುಕೊಂಡು ದಿಗ್ಭ್ರಮೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಆದರೆ, ಸಿಎಂ ತವರೂರು ಮೈಸೂರಿನಲ್ಲಿ 300 ಮಂದಿ ಸೇರಿ ಪೊಲೀಸ್ ಸ್ಟೇಷನ್'ಗೆ ಬೆಂಕಿ ಹಾಕಿದಾಗ ಸಿದ್ದರಾಮಯ್ಯಗೆ ದಿಗ್ಭ್ರಮೆ ಆಗಿಲ್ಲವೇ ಎಂದು ಪ್ರಶ್ನಿಸಿದರು.


ಈ ಪ್ರಕರಣದಲ್ಲಿ ಮೀನುಗಾರರಿಗೆ ನ್ಯಾಯ ದೊರಕುವ ವರೆಗೂ ಹೋರಾಟ ನಡೆಸಬೇಕು. ಎಸ್ಪಿ ಕಚೇರಿ ಮುಂದೆ ಧರಣಿ ಮಾಡಲು ನಾನು ಸಿದ್ದನಾಗಿದ್ದೇನೆ. ಒಂದೆರಡು ದಿನದಲ್ಲಿ ಸಿಎಂ ಅವರನ್ನು ಭೇಟಿಯಾಗಿ ಆಗ್ರಹಿಸುತ್ತೇನೆ ಎಂದರು.


ಜಾತಿ ನಿಂದನೆ ಸೆಕ್ಷನ್ ಯಾವಾಗ ಹಾಕುವುದು? ಜಾತಿಯನ್ನು ನಿಂದಿಸಿದಾಗ. ಆದರೆ, ಜಾತಿ ಯಾವುದೆಂದೇ ತಿಳಿಯದೇ ಒಂದೆರಡು ಏಟು ಕೆನ್ನೆಗೆ ಹೊಡೆದಿದ್ದಾರೆ. ಅದಕ್ಕೆ ಜಾತಿ ನಿಂದನೆ ಸೆಕ್ಷನ್ ಹಾಕಿರುವುದು ಸರಿಯಲ್ಲ. ಮಲ್ಪೆ ಆಸುಪಾಸಿನಲ್ಲಿ ಕಳ್ಳತನ ಪ್ರಕರಣ ಪತ್ತೆಹಚ್ಚುವಲ್ಲಿ ಇಲಾಖೆ ವಿಫವಾಗಿದೆ. ಆಗ ಪೋಲಿಸರು ಸತ್ತಿದ್ದೀರಾ? ನಿಮ್ಮ ವೈಫಲ್ಯ ಮುಚ್ಚಿಹಾಕುತ್ತೀರಾ ಎಂದು ಪ್ರಮೋದ್ ಮಧ್ವರಾಜ್ ಕಿಡಿಕಾರಿದರು.


ಬಗೆಹರಿದಿದ್ದ ಪ್ರಕರಣ
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ರಾಜಿ ಪಂಚಾಯಿತಿ ಮೂಲಕ ಬಗೆಹರಿದಿದ್ದ ಪ್ರಕರಣ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹರಿದಾಡಿದ ಬಳಿಕ ದೊಡ್ಡದಾಗಿದೆ. ಕೂಡಲೇ ಮೀನುಗಾರರ ವಿರುದ್ಧ ದಾಖಲಾದ ಜಾತಿ ನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ ಎಂದರು.


ಮಲ್ಪೆ ಮೀನುಗಾರರಿಗೆ ನ್ಯಾಯ ಸಿಗಬೇಕು. ಬಂದರಿನಲ್ಲಿ ಪುರುಷರಂತೆ ಮಹಿಳೆಯರು ಸಮಾನವಾಗಿ ದುಡಿಯುತ್ತಾರೆ. ಬೇರೆ ಬೇರೆ ಜಿಲ್ಲೆಯ ಜನರು ಧನ ಸಹಾಯ ಕೇಳಿಕೊಂಡು ಬಂದಾಗ ಧನ ಸಹಾಯ ಮಾಡಿದ್ದೇವೆ. ಮೀನುಗಾರರ ಋಣ ನನ್ನ ಮೇಲಿದೆ. ಆ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.


ಮೀನುಗಾರಿಕೆ ಸ್ತಬ್ದವಾದರೆ ಉಡುಪಿಯ ಆರ್ಥಿಕ ವ್ಯವಹಾರಕ್ಕೆ ಹೊಡೆತ ಬೀಳುತ್ತದೆ. ಆದರೆ, ಇಂದು ಬಂದ್ ಮಾಡಿರುವುದಕ್ಕೆ ಉದ್ಯಮಿಗಳು ಬೆಂಬಲ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಜಾತಿ ನಿಂದನೆ ಸೆಕ್ಷನ್ ವಾಪಾಸು ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಲು ಇಲಾಖೆಗಳು ಸಿದ್ದವಾಗಬೇಕು ಎಂದು ಎಚ್ಚರಿಸಿದರು.


ಮೀನುಗಾರರು ಯಾರಿಗೂ ಅನ್ಯಾಯ ಮಾಡುವುದಿಲ್ಲ, ಅವರಿಗೆ ಅನ್ಯಾಯ ಮಾಡಿದರೆ ಬಿಡುವುದಿಲ್ಲ. ರಾಜಿ ಮಾಡಿದ ಬಳಿಕವೂ ಈ ರೀತಿ ಕ್ರಮ ಕೈಗೊಂಡಿರುವುದು ಸರಿಯಲ್ಲ. ಜೇನುಗೂಡಿಗೆ ಕೈ ಹಾಕಬೇಡಿ, ಅದರ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಕಲ್ಪನೆಯೂ ನಿಮಗಿಲ್ಲ ಎಂದು ಎಚ್ಚರಿಸಿದ ಅವರು, ಮೀನುಗಾರಿಕೆ ಇಲಾಖೆ ಸಂಕಷ್ಟ ಪರಿಹಾರ ನಿಧಿ ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ದೂರಿದರು.


ಎಸ್.ಪಿ.ಯಿಂದ ಅವಮಾನ
ನಗರಸಭಾ ಸದಸ್ಯ ಯೋಗೇಶ್ ಮಾತನಾಡಿ, ಹಿಂದೊಮ್ಮೆ ಸಿಎಂ ವೇದಿಕೆಯಲ್ಲೇ ಮಹಿಳೆಯೊಬ್ಬರ ಸೀರೆ ಎಳೆದಿದ್ದರಲ್ಲವೇ? ಅವರು ಸಂಯಮ ಕಳೆದುಕೊಂಡಿದ್ದರು ಅಲ್ಲವೇ? ಸಿಎಂಗೆ ಯಾವ ಸೆಕ್ಷನ್ ಅನ್ವಯಿಸುತ್ತದೆ ಎಸ್ಪಿಯವರೇ? ನಿಮ್ಮ ಮನವಿ, ಪ್ರತಿಭಟನೆಯ ಮಾಹಿತಿ ನೀಡಲು ಬಂದಾಗ 10 ಸಾವಿರ ಜನರನ್ನು ತಡೆಯುವ ತಾಕತ್ತು ಇದೆ ಎಂದು ಹೇಳಿದ್ದೀರಿ. ಮೀನುಗಾರರ ಇತಿಹಾಸ ನಿಮಗೆ ತಿಳಿದಿದೆಯೇ? ನಮ್ಮ ಶಕ್ತಿ ಪ್ರದರ್ಶನ ಮಾಡಬೇಕೇ ಎಂದು ಪ್ರಶ್ನಿಸಿದರು.


ಕಳ್ಳರನ್ನು ಹಿಡಿದರೆ ನಾವು ಬರುವ ವರೆಗೆ ಕಟ್ಟಿ ಇಡಿ ಎಂದು ಮಲ್ಪೆ ಠಾಣೆಯವರೇ ಈ ಹಿಂದೆ ಹೇಳಿದ್ದರು. ಮೀನು ಕದ್ದಿದ್ದಾರೆ ಎಂದು ತೋರಿಸಿ ಕೊಟ್ಟದ್ದಕ್ಕೆ ಶಿಲ್ಪಾ ಎಂಬ ದಲಿತ ಮಹಿಳೆಯನ್ನೂ ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಮನುಷ್ಯರಿಗೋಸ್ಕರ ಕಾನೂನು, ಕಾನೂನಿಗೋಸ್ಕರ ಮನುಷ್ಯರಲ್ಲ ಎಂದರು.


ಬಂಧನಕ್ಕೆ ಒಳಗಾದ ಮಹಿಳೆಯ ಮಕ್ಕಳಿಗೆ ಪರೀಕ್ಷೆ ಇದೆ. ಅವರ ಸ್ಥಿತಿ ಏನಾಗಬೇಕು? ಆಕೆಯ ಪೋಟೊವನ್ನು ಮಾಧ್ಯಮಕ್ಕೆ ನೀಡಿದ ಇಲಾಖೆ, ಅಮಾನತಾದ ಪೋಲಿಸರ ಪೋಟೊ ಮಾಧ್ಯಮಕ್ಕೆ ಎಸ್ಪಿಯವರು ನೀಡುತ್ತೀರಾ ಎಂದು ಪ್ರಶ್ನಿಸಿದರು.


ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಮಾತನಾಡಿ, ಜಾಮೀನು ರಹಿತ ಸೆಕ್ಷನ್ ಗಳನ್ನು ಅಳವಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಳಂಕ ಹೊರಿಸಿದ್ದಾರೆ. ಹಿಂದೆ ಪೋಲಿಸರಿಗೆ ಬಂದರಿನೊಳಗೆ ಪ್ರವೇಶ ಇರಲಿಲ್ಲ. ನಾವೇ ಪರಿಹರಿಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಬಂದಿದೆ. ಹಿರಿಯರು ನಮಗೆಲ್ಲಾ ಉತ್ತಮ ಸಂಸ್ಕೃತಿ, ಸೌಜನ್ಯದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಮೀನುಗಾರರ ವಿರುದ್ದ ಹಾಕಿರುವ ಜಾತಿ ನಿಂದನೆ ಪ್ರಕರಣ ಹಿಂಪಡೆಯಬೇಕು. ಅತೀ ಶೀಘ್ರದಲ್ಲಿ ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಬೇಕು. ಘಟನೆಗೆ ಮೂಲ ಕಾರಣರಾದ ಹೆಡ್ ಕಾನ್ ಸ್ಟೆಬಲ್ ಲೋಕೇಶ್ ಹಾಗೂ ಲಕ್ಷ್ಮಣ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಮುಂದಿನ ಎರಡು ದಿನದೊಳಗೆ ಬಂಧಿತರು ಬಿಡುಗಡೆಗೊಳ್ಳಬೇಕು ಎಂದು ಒತ್ತಾಯಿಸಿದರು.


ತಾಂಡೇಲ್ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಕನ್ನಿ ಸಂಘದ ಅಧ್ಯಕ್ಷ ದಯಾಕರ್ ಸುವರ್ಣ, ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮುಖಂಡರಾದ ಮಂಜು ಕೊಳ, ಸಾಧು ಸಾಲ್ಯಾನ್, ಮೋಹನ್ ಕುಂದರ್, ಜಯ ಸಿ. ಕೋಟ್ಯಾನ್, ಗೀತ ಕರ್ಕೇರ, ಕಾಂಗ್ರೆಸ್ ಮುಖಂಡ ಪ್ರಸಾದರಾಜ್ ಕಾಂಚನ್ ಮೊದಲಾದವರಿದ್ದರು.
ಮಲ್ಪೆಯಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಬೋಟುಗಳು ಸಮುದ್ರಕ್ಕೆ ಇಳಿಯದೇ ಬಂದರಿನಲ್ಲಿ ಲಂಗರು ಹಾಕಲಾಗಿತ್ತು. ಎಲ್ಲೆಡೆ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು 

Ads on article

Advertise in articles 1

advertising articles 2

Advertise under the article