ಮೈಕ್ರೋ ಫೈನಾನ್ಸ್, ಲೇವಾದೇವಿ ಸಂಸ್ಥೆಗಳ ನೋಂದಣಿ ಕಡ್ಡಾಯ
Saturday, March 22, 2025
ಲೋಕಬಂಧು ನ್ಯೂಸ್
ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್, ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿದಾರರು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆದೇಶ 2025ರನ್ವಯ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳು, ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿದಾರರು ನೀಡುವ ದುಬಾರಿ ಬಡ್ಡಿಯಿಂದ ಜನರು ತೊಂದರೆಗೊಳಗಾಗುವುದರ ಜೊತೆಗೆ ಕೆಲವು ಸಂಸ್ಥೆಗಳು ಬಲವಂತವಾಗಿ ವಸೂಲಾತಿ ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು, ಆರ್ಥಿಕ ದುರ್ಬಲರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸುವ ಪ್ರಕರಣಗಳಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆದ್ಯಾದೇಶ ಜಾರಿಗೆ ತಂದಿದ್ದು, ಅದರನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಕಡ್ಡಾಯವಾಗಿ 30 ದಿನಗಳೊಳಗಾಗಿ ಸೂಕ್ತ ಪ್ರಾಧಿಕಾರದ ಮುಂದೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಮಾರ್ಗದರ್ಶನ ಹಾಗೂ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ತೊಂದರೆ ನೀಡುವ ಪ್ರಕರಣಗಳು ಕೇಳಿಬರಲು ಕಾರಣ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪಾಲಿಸದಿರುವುದು ಎಂದರು.
ಆರ್.ಬಿ.ಐ ಮಾರ್ಗಸೂಚಿ ಪ್ರಕಾರ ಮೈಕ್ರೋ ಫೈನಾನ್ಸ್ ಗಳು ನಿಗದಿತ ಮೊತ್ತದ ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಕರ್ನಾಟಕ ಸರ್ಕಾರದ ಹೊಸ ಆದೇಶದನ್ವಯ ಸಾಲಗಾರ ಅಥವಾ ಅವರ ಕುಟುಂಬದ ಸದಸ್ಯರಿಗೆ ಒತ್ತಡ ಹಾಕುವುದು, ತಡೆಯೊಡ್ಡುವುದು, ಹಿಂಸೆ ನೀಡುವುದು, ಬೆದರಿಸುವುದು, ಅವರನ್ನು ನಿರಂತರವಾಗಿ ಹಿಂಬಾಲಿಸುವುದು, ಸ್ವತ್ತಿನ ಬಳಕೆ ಅಡ್ಡಿಪಡಿಸುವುದು, ಹಣ ಪಾವತಿಗೆ ಬಲವಂತ ಹಾಗೂ ಅನುಚಿತ ಪ್ರಭಾವ ಬಳಸುವುದು ಸೇರಿದಂತೆ ಯಾವುದೇ ದೌರ್ಜನ್ಯಗಳನ್ನು ಸಾಲಗಾರನಿಂದ ಹಣ ವಸೂಲಾತಿಗಾಗಿ ಸ್ವತಃ ಅಥವಾ ಏಜೆಂಟ್ ಗಳ ಮೂಲಕ ಮಾಡುವಂತಿಲ್ಲ.
ಒಂದು ವೇಳೆ ದೌರ್ಜನ್ಯ, ದಬ್ಬಾಳಿಕೆಯಂಥ ಪ್ರಕರಣ ಕಂಡುಬಂದಲ್ಲಿ ಅಂಥವರ ವಿರುದ್ಧ ರಾಜ್ಯ ಸರಕಾರ ಜಾರಿಗೆ ತಂದಿರುವ ಹೊಸ ನಿಯಮಗಳನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೋಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ, ಮೈಕ್ರೋ ಫೈನಾನ್ಸ್ ಗಳ ಮುಖ್ಯಸ್ಥರು, ಲೇವಾದೇವಿಗಾರರು ಮೊದಲಾದವರಿದ್ದರು.