
ಅನಿಲ ದರ ಏರಿಕೆ ಬಗ್ಗೆ ಕಾಂಗ್ರೆಸ್ ಆರ್ಥಿಕ ತಜ್ಞರು ಸತ್ಯ ಮಾತನಾಡುತ್ತಿಲ್ಲ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ದರ ಏರಿಕೆಯಾಗಿದೆ. ಒಂದು ಹಂತದಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗೂ ಕಷ್ಟವಾಗುತ್ತದೆ. ಅವಾಗ ದರ ಏರಿಕೆ ಅನಿವಾರ್ಯ. ಕಾಂಗ್ರೆಸಿನ ಆರ್ಥಿಕ ತಜ್ಞರು ಸತ್ಯ ಮಾತನಾಡುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿನ ಬೆಲೆ ಏರಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಆಯಿಲ್ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವಾಗ ಸರ್ಕಾರ ಮಧ್ಯ ಪ್ರವೇಶಿಸಿ ಏರಿಕೆಯಾಗದಂತೆ ನೋಡಿಕೊಂಡಿದೆ. ಗ್ಯಾಸ್ ಹೊರದೇಶದಿಂದ ಬರಬೇಕು, ನಮ್ಮಲ್ಲಿ ಉತ್ಪಾದನೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಬಳಕೆ ಜಾಸ್ತಿ ಆಗುತ್ತಿದ್ದು, ಒಂದು ಹಂತದಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಯವರಿಗೆ ನಷ್ಟ ಭರಿಸಲು ಸಾಧ್ಯವಾಗುವುದಿಲ್ಲ. ಆದರೂ ಜನರಿಗೆ ಹೊರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.
ಮೋದಿ ಸರ್ಕಾರ ಬಂದ ಬಳಿಕ ಗ್ಯಾಸ್ ಬಳಕೆ ಜಾಸ್ತಿಯಾಗುತ್ತಿದ್ದು, 2014ರಲ್ಲಿ ಭಾರತದಲ್ಲಿ ಶೇ. 64 ಜನರಲ್ಲಿ ಮಾತ್ರ ಗ್ಯಾಸ್ ಬಳಕೆಯಲ್ಲಿತ್ತು. ಇವತ್ತು ಶೇ. 100 ಗ್ಯಾಸ್ ಬಳಸುತ್ತಿದ್ದಾರೆ. ಗ್ಯಾಸ್ ನ್ನು ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ.
ನಾವೆಲ್ಲರೂ ಕೇಂದ್ರ ಸರಕಾರದ ಜೊತೆಗಿರಬೇಕು. ಹರದೀಪ್ ಪೋರಿ ವಿಶ್ವಮಟ್ಟದಲ್ಲಿ ಗ್ಯಾಸ್ ಲಭ್ಯತೆ ಹುಡುಕುತ್ತಿದ್ದಾರೆ. ಈಗಿನ ಪರಿಸ್ಥಿತಿ ತಾತ್ಕಾಲಿಕ ಎಂದು ನಾನು ನಂಬುತ್ತೇನೆ ಎಂದರು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಮಾತನಾಡಿದ ಅಣ್ಣಾಮಲೈ, ನಾವೆಲ್ಲ ರಾಷ್ಟ್ರೀಯ ಪಕ್ಷದ ಸದಸ್ಯರು. ನಾನೊಬ್ಬ ಕಾರ್ಯಕರ್ತ. ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರು. ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ಮಾತ್ರ ನನ್ನ ಧರ್ಮ. ಏನೇ ಅವಕಾಶ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದರು.
ತಮಿಳುನಾಡಿನಲ್ಲಿ ಚುನಾವಣೆ ಬರುತ್ತಿದ್ದು, ಗೃಹ ಮಂತ್ರಿಯನ್ನು ತಮಿಳುನಾಡು ವಿಪಕ್ಷ ನಾಯಕ ಪಳನಿಸ್ವಾಮಿ ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಎಐಡಿಎಂಕೆ ಕುರಿತ ನಮ್ಮ ನಿಲುವು ಎಲ್ಲರಿಗೂ ಗೊತ್ತು. ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು ಎಲ್ಲರ ಉದ್ದೇಶ ಎಂದರು.
ಎಐಡಿಎಂಕೆ ಬಹಳ ದೊಡ್ಡ ದ್ರವಿಡಿಯನ್ ಪಕ್ಷ. ಗೃಹ ಸಚಿವರನ್ನು ಭೇಟಿ ಆಗಿರುವುದರಿಂದ ಸಂದೇಶ ಸ್ಪಷ್ಟವಾಗಿದೆ. ಎಐಡಿಎಂಕೆ, ಬಿಜೆಪಿ ಜೊತೆ ಮೈತ್ರಿ ಬಯಸುತ್ತಿದ್ದು ಗೃಹ ಸಚಿವರು ಮೈತ್ರಿ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಎಲ್ಲಿ ಇರಬೇಕು, ಯಾವ ಪೊಸಿಷನ್ ನಲ್ಲಿರಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದೂ ಪಕ್ಷಕ್ಕೆ ಗೊತ್ತಿದ್ದು, ಏನೇ ತೀರ್ಮಾನ ತೆಗೆದುಕೊಂಡರೂ ನಾನೊಬ್ಬ ಕಾರ್ಯಕರ್ತ ಎಂದರು.
ತಮಿಳುನಾಡಿನಲ್ಲಿ ರಾಜಕೀಯವಾಗಿ ಬದಲಾವಣೆ ಆಗಲಿದ್ದು, ಪಕ್ಷಕ್ಕೆ ಇನ್ನೊಂದು ಅವಕಾಶ ಸಿಗಬಹುದು. ಮಹಾರಾಷ್ಟ್ರ, ಒರಿಸ್ಸಾದಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ಏನಾಗಿದೆ ಎಂದು ಗೊತ್ತು. ತಮಿಳುನಾಡು ಸುದೀರ್ಘ ಕಾಲದ ಆಟ. ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ, ಕಾಯುತ್ತೇವೆ. ಇನ್ನು 20- 30 ವರ್ಷ ಬೇಕಾದರೂ ಆಗಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ಕೊಡಬೇಕು. ಪಕ್ಷ ರಾಷ್ಟ್ರೀಯ ಮಟ್ಟದಿಂದ ಆಲೋಚನೆ ಮಾಡುತ್ತದೆ. ಡಿಎಂಕೆ ಎಷ್ಟು ಗಲೀಜು ಸರಕಾರ ನಡೆಸುತ್ತಿದೆ ಎಂದು ಎಲ್ಲರಿಗೂ ಗೊತ್ತು. 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣ ನ್ಯಾಯಾಲಯದಲ್ಲಿದ್ದು, ಒಬ್ಬ ಮಂತ್ರಿ ಒಂದೂವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ ಎಂದು ಕಿಡಿಕಾರಿದರು.
ತಮಿಳುನಾಡು ರಾಜಕೀಯದಲ್ಲಿ ದೀರ್ಘಕಾಲಿನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ತಾಳ್ಮೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.
ಬಿಜೆಪಿಯಲ್ಲಿ ರಾಜಿನಾಮೆ ಎಂಬುದಿಲ್ಲ. ಮುಂದಿನ ರಾಜ್ಯ ಅಧ್ಯಕ್ಷ ಚುನಾವಣೆ ಆಗುವಾಗ ನಾನು ಸ್ಪರ್ಧೆಯಲ್ಲಿಲ್ಲ. ಯಾವಾಗ ಬೇಕಿದ್ದರೂ ರಾಜ್ಯಾಧ್ಯಕ್ಷ ಚುನಾವಣೆ ಆಗಬಹುದು ಎಂದರು.
ವಕ್ಫ್ ಆಕ್ಟ್ ಗೆ ಅನೇಕ ತಿದ್ದುಪಡಿಗಳು ಆಗುತ್ತಲೇ ಬಂದಿದೆ. 1995ರಲ್ಲಿ ಅತಿ ದೊಡ್ಡ ತಿದ್ದುಪಡಿ ಆಗಿದ್ದು, 2013ರಲ್ಲಿ ಕಾಂಗ್ರೆಸ್ ಸರಕಾರದಲ್ಲಿ ತಿದ್ದುಪಡಿ ದೊಡ್ಡ ಮಟ್ಟದಲ್ಲಿ ಆಗಿತ್ತು. 2025ರಲ್ಲಿ ಅತಿ ದೊಡ್ಡ ಬದಲಾವಣೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಿದ್ದುಪಡಿ ಆಗುತ್ತದೆ, ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ವಕ್ಫ್ ಬೋರ್ಡ್ ದೇಶದಲ್ಲಿ 39 ಲಕ್ಷ ಎಕರೆ ಭೂಮಿ ಹೊಂದಿದೆ. ರೈಲ್ವೆ ಇಲಾಖೆ ಕೈಯಲ್ಲಿ ಕೇವಲ 52 ಲಕ್ಷ ಎಕರೆ ಇದ್ದು, ಅದು ರೈಲ್ವೇ ಹಳಿಗಳನ್ನು ಒಳಗೊಂಡಿದೆ. 2013ರ ವರೆಗೆ 18 ಲಕ್ಷ ಎಕರೆ ಭೂಮಿಯಿಂದ 10 ವರ್ಷದಲ್ಲಿ 21 ಲಕ್ಷ ಎಕರೆ ಭೂಮಿ ಏರಿದೆ ಎಂದರು.
ಯಾರು ಕೂಡಾ ಬಂದು ಇದು ನನ್ನ ಭೂಮಿ ಎಂದು ಹೇಳುವಂತಿಲ್ಲ. ಅದರಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಏನು ಎನ್ನುವುದು ಮುಖ್ಯ. ಬಹಳ ಅದ್ಭುತವಾದ ಬದಲಾವಣೆಯೊಂದಿಗೆ ಜಾರಿ ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿರುವ ಅಕ್ಕಂದಿರಿಗೆ, ತಾಯಂದಿರಿಗೆ ಅನುಕೂಲವಾಗಲಿದೆ. ಬಡ ಮುಸ್ಲಿಮರಿಗೆ ಅದರಿಂದ ಅನುಕೂಲವಾಗಲಿದೆ. ಹಿಂದೆ ಶಿಯಾ, ಸುನ್ನಿ ಮುಸ್ಲಿಮರು ಮಾತ್ರ ಪರಿಗಣನೆಯಲ್ಲಿದ್ದರು. ಈಗ ಅಫ್ಘಾನ್ ಮುಸ್ಲಿಂ, ಬೋರ ಮುಸ್ಲಿಮರಿಗೂ ಅವಕಾಶ ನೀಡಲಾಗಿದೆ. ಇದು ಸಂವಿಧಾನ ವಿರೋಧಿ ಅಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನ್ಯಾಯಾಲಯದ ಮೊರೆ ಹೋಗಿದ್ದು, ಎಲ್ಲಾ ಪ್ರಕರಣಗಳು ವಜಾಗೊಳ್ಳಲಿದೆ ಎಂದರು.
ರಾಜ್ಯ ಕಾಂಗ್ರೆಸ್ ಸಕಾರ ಜನವಿರೋಧಿ
ನಾನು ಕರ್ನಾಟಕ ಸರ್ಕಾರವನ್ನು ಹೊರಗಿನಿಂದ ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಪವರ್ ಫುಲ್ ವ್ಯಕ್ತಿ ಸಿಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕರ್ನಾಟಕದ ಜನರ ಸಂಸ್ಕೃತಿ ಶ್ರೀಮಂತವಾಗಿದೆ. ಸರ್ಕಾರ ಜನ ವಿರೋಧಿಯಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ ಎನ್ನುವುದನ್ನು ಇಡೀ ದೇಶ ನೋಡುತ್ತಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂಧ್ರ ಅವರ ಜನಾಕ್ರೋಶ ಯಾತ್ರೆ ಎಲ್ಲರೂ ಜೊತೆಯಾಗಬೇಕು. ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆ ಇಲ್ಲ. ಆದರೆ, ಜನರ ಪ್ರೀತಿಯನ್ನು ಸರ್ಕಾರ ಕಳೆದುಕೊಂಡಿದೆ. ಜನರು ಪ್ರೀತಿ ಕೊಟ್ಟು ಬಿಜೆಪಿ ಜೊತೆ ಯಾತ್ರೆಯಲ್ಲಿ ಭಾಗವಹಿಸಬೇಕು. ರಾಜ್ಯದಿಂದ ಕಾಂಗ್ರೆಸ್ ತೆಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.