
ಮುಂದಿನ ಒಲಿಂಪಿಕ್ಸ್'ಗೆ ಸಿದ್ಧರಾಗಿ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಕ್ರೀಡಾಳುಗಳಿಗಾಗಿ ವಿದೇಶಗಳಲ್ಲಿ ಸಣ್ಣ ಸಣ್ಣ ನಗರಗಳಲ್ಲಿಯೂ ಸ್ಟೇಡಿಯಂಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. 2036ರಲ್ಲಿ ಭಾರತದಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ನಡೆಯುವ ಸಾಧ್ಯತೆಗಳಿದ್ದು, ಅದಕ್ಕೆ ಈಗಾಗಲೇ ಯುವ ತಂಡ ಸಿದ್ಧವಾಗಬೇಕು. ಕನಿಷ್ಠ 100 ಪದಕ ಪಡೆಯುವ ಗುರಿ ಹೊಂದಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಏ.9ರಂದು ಆರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
2008ರಲ್ಲಿ ಚೀನಾ, ಒಲಂಪಿಕ್ಸ್ ಆಯೋಜಿಸಿ 100 ಪದಕಗಳನ್ನು ಬಾಚಿಕೊಂಡಿತ್ತು ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ಭಾರತದಲ್ಲಿ ಕ್ರೀಡಾ ಕ್ಷೇತ್ರ ಬಹಳಷ್ಟು ಹಿಂದುಳಿದಿದ್ದು, ಶಾಲಾ ಮಟ್ಟದಲ್ಲೇ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಅನಿವಾರ್ಯ. ಕೇಂದ್ರ ಸರ್ಕಾರ ಸ್ಥಳೀಯ ಹಂತದಲ್ಲೇ ಕ್ರೀಡೆಯನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಕ್ರೀಡಾ ಬಜೆಟ್ 3 ಪಟ್ಟು ಏರಿಕೆಯಾಗಿದೆ ಎಂದರು.
ಭಾರತ, ಸುಮಾರು 200 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಚೀನಾ 1980ರ ವರೆಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಆದರೂ ಕಳೆದ ಒಲಂಪಿಕ್ಸ್ ನಲ್ಲಿ ಚೀನಾ 727 ಪದಕಗಳನ್ನು ಪಡೆದರೆ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಕೇವಲ 41 ಪದಕಗಳನ್ನಷ್ಟೇ ಗಳಿಸಿತ್ತು ಎಂದರು.
ಶಾಲಾ ಹಂತದಲ್ಲಿ ಮಕ್ಕಳನ್ನು ಕ್ರೀಡಾಕ್ಷೇತ್ರಕ್ಕೆ ಬರಮಾಡಿಕೊಳ್ಳುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಸ್ಪೋರ್ಟ್ಸ್ ಕಲ್ಚರ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದಾಗಿ ಡ್ರಗ್ಸ್ ಮುಂತಾದ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.
ಅದಮಾರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್, ಖಜಾಂಚಿ ಸಿಎ ಪ್ರಶಾಂತ್ ಹೊಳ್ಳ, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಕ್ರೀಡಾಕೂಟ ಸಂಚಾಲಕ ಡಾ.ಜೆರಾಲ್ಡ್ ಸಂತೋಷ್ ಡಿ'ಸೋಜಾ, ಕರ್ಣಾಟಕ ಬ್ಯಾಂಕ್ ಸಿಇಓ ಕೃಷ್ಣನ್ ಎಚ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿ, ಕಾಲೇಜಿನ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಾಮು ಎಲ್. ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ನಿರೂಪಿಸಿದರು.