-->
ಗ್ರಾ.ಪಂ. ನೌಕರರಿಗೆ ಇಎಸ್ಐ ಸೌಲಭ್ಯ ಕಲ್ಪಿಸಿ

ಗ್ರಾ.ಪಂ. ನೌಕರರಿಗೆ ಇಎಸ್ಐ ಸೌಲಭ್ಯ ಕಲ್ಪಿಸಿ

ಲೋಕಬಂಧು ನ್ಯೂಸ್
ಉಡುಪಿ: ಗ್ರಾಮ ಪಂಚಾಯತ್ ನೌಕರರಿಗೆ ಇ.ಎಸ್.ಐ ಸೌಲಭ್ಯ ನೀಡುವಂತೆ ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್ ಮಾಂಡವೀಯ ಅವರಿಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.ಕರ್ನಾಟಕದ 5,995 ಗ್ರಾ.ಪಂ.ಗಳೂ ಸೇರಿದಂತೆ ದೇಶದಲ್ಲಿ 2,55,401 ಗ್ರಾ. ಪಂ.ಗಳಿದ್ದು ಅವುಗಳಲ್ಲಿ 16,77,005 ಮಂದಿ ಸಿಬ್ಬಂದಿ ದುಡಿಯುತ್ತಿದ್ದಾರೆ. ಅವರಿಗೆ ಇ.ಎಸ್.ಐ (ಆರೋಗ್ಯ ವಿಮೆ) ಸೌಲಭ್ಯ ಸಿಗುತ್ತಿಲ್ಲ. ಗ್ರಾ.ಪಂ.ಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡಮಾಲಿ, ವಾಟರ್ ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ 10ಕ್ಕಿಂತ ಕಡಿಮೆ ಸಿಬ್ಬಂದಿಗಳಿರುವುದರಿಂದ ಈಗಿರುವ ನಿಯಮದಂತೆ ಆ ಸಿಬ್ಬಂದಿಗಳು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದಾರೆ.


ಆದ್ದರಿಂದ ಮಾನವೀಯ ನೆಲೆಯಲ್ಲಿ ಕೇಂದ್ರ ಸರಕಾರ, ಎಲ್ಲಾ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು, ಪಂಚಾಯತ್ ಸಿಬ್ಬಂದಿಗಳಿಗೂ ಇ.ಎಸ್.ಐ ಸೌಲಭ್ಯ ನೀಡಿ, ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕೆಂದು ಸಂಸದ ಕೋಟ ಮನವಿ ಮಾಡಿದ್ದಾರೆ.


ಮನವಿ ಸ್ವೀಕರಿಸಿದ ಸಚಿವ ಮನ್ಸುಕ್, ಈ ವಿಚಾರ ಇದುವರೆಗೆ ತನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.


ಸಂಸದ ಕೋಟ ಜೊತೆ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ್ ಇದ್ದರು.

Ads on article

Advertise in articles 1

advertising articles 2

Advertise under the article