-->
ರೈಲ್ವೆ ಮೇಲ್ಸೇತುವೆ ಕಾಮಗಾರಿ 'ಏಪ್ರಿಲ್ ಫೂಲ್'!

ರೈಲ್ವೆ ಮೇಲ್ಸೇತುವೆ ಕಾಮಗಾರಿ 'ಏಪ್ರಿಲ್ ಫೂಲ್'!

ಲೋಕಬಂಧು ನ್ಯೂಸ್
ಉಡುಪಿ: ಕಳೆದ 8 ವರ್ಷದಿಂದ ಉಡುಪಿ ಸಂಸದರು ಇಂದ್ರಾಳಿ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸುವುದಾಗಿ ಹೇಳಿ ಉಡುಪಿಯ ಜನತೆಯನ್ನು ಫೂಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ 'ಏಪ್ರಿಲ್‌ ಫೂಲ್' ಎಂಬುದಾಗಿ ವಿಶಿಷ್ಟ ರೀತಿಯಲ್ಲಿ ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಕಲ್ಸಂಕ ವೃತ್ತದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ಮೊದಲು ಹೋರಾಟಗಾರರಾದ ಅಮೃತ್ ಶೆಣೈ ಮತ್ತು ಅನ್ಸಾರ್‌ ಅಹಮದ್‌ ತಲೆಗೂದಲು ಬೋಳಿಸಿಕೊಂಡು ಕೇಂದ್ರ ಸರ್ಕಾರ ಜನರನ್ನು ಬೋಳಿಸುತ್ತಿದೆ ಎಂದೂ, ಇತರ ಹೋರಾಟಗಾರರು ತಂತಮ್ಮ ಕಿವಿ ಮೇಲೆ ದಾಸವಾಳ ಹೂವುಗಳನ್ನಿಟ್ಟು, ಉಡುಪಿ ಸಂಸದರು ಜನರ ಕಿವಿ ಮೇಲೆ ಹೂವಿಟ್ಟು ಮೋಸ ಮಾಡುತ್ತಿದ್ದಾರೆ ಎಂಬುದನ್ನು ಸಂಕೇತಿಸಿದರು.ನಂತರ ರೈಲ್ವೆ ಮೇಲ್ಸೇತುವೆಯ ಪ್ರತಿಕೃತಿಯೊಂದಿಗೆ ಕಲ್ಸಂಕದಿಂದ ಇಂದ್ರಾಳಿ ವರೆಗೆ ಪಾದಯಾತ್ರೆ ನಡೆಸಲಾಯಿತು.ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಿಕ್ಷುಕನ ವೇಷ ಹಾಕಿದ್ದ ಅನ್ಸಾರ್ ಅಹಮ್ಮದ್‌ಗೆ 500 ರೂ. ಭಿಕ್ಷೆ ನೀಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.


ಪಾದಯಾತ್ರೆಯುದ್ದಕ್ಕೂ ಭಿಕ್ಷೆ ಬೇಡಿದ ಅನ್ಸಾರ್‌, ಅದರಿಂದ ಸಂಗ್ರಹವಾಗುವ ಹಣವನ್ನು ಮೇಲ್ಸೇತುವೆ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಹೇಳಿ, ಆ ಮೂಲಕವಾದರೂ ಕಾಮಗಾರಿ ತ್ವರಿತಗೊಳ್ಳಬಹುದು ಎಂದು ಆಶಿಸಿದರು.


ನಂತರ ಇಂದ್ರಾಳಿಯಲ್ಲಿ ಮೋದಿ, ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮುಖವಾಡಗಳನ್ನು ಧರಿಸಿ, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಅಪೂರ್ಣ ಮೇಲ್ಸೆತುವೆಯನ್ನು ಉದ್ಘಾಟಿಸುವ ಅಣುಕು ಕಾರ್ಯಕ್ರಮ ನಡೆಸಲಾಯಿತು.


ವಿಳಂಬಕ್ಕೆ ಸಂಸದರೇ ಹೊಣೆ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಕಾಮಗಾರಿ ವಿಳಂಬವಾದಷ್ಟೂ ಯೋಜನಾ ವೆಚ್ಚ ಹೆಚ್ಚಾಗುತ್ತದೆ, ವೆಚ್ಚ ಹೆಚ್ಚಾದಷ್ಟು ಹೆಚ್ಚು ಅನುದಾನ ತರಿಸಬೇಕಾಗುತ್ತದೆ. ಅದರಿಂದ ಯಾರಿಗೆಲ್ಲಾ ಲಾಭ ಆಗುತ್ತಿದೆಯೋ ಗೊತ್ತಿಲ್ಲ, ಜನರಿಗಂತೂ ನಷ್ಟ ಕಷ್ಟ ಆಗುತ್ತಿದೆ ಎಂದು ಟೀಕಿಸಿದರು.


ಇದು ಕೇಂದ್ರ ಸರ್ಕಾರದ ಕಾಮಗಾರಿ, ಕೇಂದ್ರದಲ್ಲಿ ಇಲ್ಲಿನ ಪ್ರತಿನಿಧಿಯಾಗಿರುವ ಸಂಸದರು ಈ ವಿಳಂಬಕ್ಕೆ ಜವಾಬ್ದಾರಿಯಾಗಿದ್ದಾರೆ. ಸಂಬಂಧಪಟ್ಟ ಕಚೇರಿಗೆ ಹೋಗಿ ಅನುಮೋದನೆ, ಅನುದಾನ ತರುವ ಕೆಲಸ ಸಂಸದರದ್ದು ಎಂದರು.


ಯಾರಿಗೆ ಹೇಳಬೇಕೆಂದೇ ಗೊತ್ತಿಲ್ಲ!
ಅಲ್ಲದೇ ಇಲ್ಲಿನ ಸಂಸದರು ಈ ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಡಿಸಿಗೆ ಹೇಳಿದ್ದೇನೆ ಎನ್ನುತ್ತಾರೆ. ಅವರು ಹೇಳಬೇಕಾದ್ದು ರಾ.ಹೆ. ಪ್ರಾಧಿಕಾರಕ್ಕೆ ಮತ್ತು ರೈಲ್ವೆ ಇಲಾಖೆಗೆ. ಆದರೆ, ಅವರಿಗೆ ಯಾರಿಗೆ ಹೇಳಬೇಕು ಎಂದೇ ಗೊತ್ತಿಲ್ಲ ಎಂದವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ಪ್ರಮುಖರಾದ ರಮೇಶ್‌ ಕಾಂಚನ್, ಡಾ.ಸುನಿತಾ ಶೆಟ್ಟಿ, ಮಹಾಬಲ ಕುಂದರ್, ಸುರೇಶ್ ಶೆಟ್ಟಿ ಬನ್ನಂಜೆ, ಜ್ಯೋತಿ ಹೆಬ್ಬಾರ್, ಅಶೋಕ್ ಕುಮಾರ್, ಕುಶಲ ಶೆಟ್ಟಿ, ಕೀರ್ತಿ ಶೆಟ್ಟಿ, ಹರಿಪ್ರಸಾದ್ ರೈ, ಪ್ರಶಾಂತ್ ಜತ್ತನ್ನ, ರೆನೋಲ್ಡ್ ಪ್ರವೀಣ್ ಕುಮಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರೊ.ಸುರೇಂದ್ರನಾಥ ಶೆಟ್ಟಿ, ಎಂ.ಎ.ಗಫೂರ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article