ಮಹಾವೀರರ ಅಹಿಂಸಾ ಮಾರ್ಗ ಪಾಲನೆ ಬದುಕಿಗೆ ದಾರಿದೀಪ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಭಗವಾನ್ ಮಹಾವೀರರ ಮುಖ್ಯ ತತ್ವವಾದ ಅಹಿಂಸಾ ಮಾರ್ಗವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಉದ್ಘಾಟಿಸಿ, ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಭಗವಾನ್ ಮಹಾವೀರರ ಆದರ್ಶಗಳು ಇಂದಿನ ಕಾಲಘಟ್ಟಕ್ಕೆ ಅತೀ ಆವಶ್ಯವಾಗಿದ್ದು. ಮನುಷ್ಯ ತನ್ನ ಬದುಕಿನ ಬಗೆಗೆ ತೃಪ್ತಿ ಹೊಂದಬೇಕು ಎಂಬುದನ್ನು ಜಗತ್ತಿಗೆ ಸಾರಿದ ಮಹಾವೀರರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಪ್ರಸ್ತುತ ಸಮಯದಲ್ಲಿ ಮಹಾವೀರರ ಅಹಿಂಸಾ ತತ್ವಗಳು ಇನ್ನಷ್ಟು ಪ್ರಚಾರಗೊಳಿಸುವುದರಿಂದ ಜನರು ಶಾಂತಿಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.
ಪ್ರೊ.ವೃಷಭರಾಜ್ ಜೈನ್ ಉಪನ್ಯಾಸ ನೀಡಿ, ಸಾಮಾನ್ಯ ಜೀವನ ತೊರೆದು ಆಧ್ಯಾತ್ಮಿಕತೆ ಆಳವಡಿಸಿಕೊಂಡ ಮಹಾವೀರರು ಅಹಿಂಸೆಯೇ ಪರಮ ಧರ್ಮ ಎಂಬುದನ್ನು ನಂಬಿದವರು. ಅವರ ಪಂಚ ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯ ಅನುಸರಿಸುವುದರಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ ಎಂದು ತಮ್ಮ ತತ್ವಗಳಲ್ಲಿ ಸಾರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಅಧ್ಯಕ್ಷ ಡಾ.ನಿತಿನ್ ಪಾಟೇಲ್, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಜೈನ್ ಮಿಲನ್ ಪದಾಧಿಕಾರಿಗಳು, ಜಿಲ್ಲಾಡಳಿತದ ಸಿಬ್ಬಂದಿ ಮತ್ತು ಅಧಿಕಾರಿಗಳು ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಡಾ. ನಿತಿನ್ ಕುಮಾರ್ ವಂದಿಸಿದರು.