ಇತಿ ಮಿತಿ ಮೀರಿದ ಯತ್ನಾಳ್
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತಿ ಮಿತಿಗಳನ್ನು ಮೀರಿದರು. ನಾಲಗೆ ಮೇಲೆ ಹಿಡಿತ ಸಾಧಿಸಿಕೊಳ್ಳುವ ವಿಚಾರದಲ್ಲಿ ವಿಫಲರಾದರು. ಅವರ ಬುದ್ಧಿಯನ್ನು ಮತ್ತೊಬ್ಬರ ಕೈಗೆ ಕೊಟ್ಟ ಪರಿಣಾಮವಾಗಿ ಇಂದು ಈ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಪಕ್ಷದೊಳಗಿನ ಯಾರಿಗೂ ಸಂತೋಷ ತರುವ ವಿಚಾರವಲ್ಲ. ಯಾರೊಬ್ಬರು ಬಿಟ್ಟು ಹೋದರೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ತ್ರಿವಳಿ ತಲಾಖ್ ನಿಷೇಧ ಜಾರಿಗೆ ತಂದಿದ್ದು ನಾವು. ಆದರೆ, ವಿಧಾನಸೌಧದಲ್ಲಿ `ಪಾಕಿಸ್ತಾನ ಜಿಂದಾಬಾದ್' ಎಂದವರನ್ನು, ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗೆ ಮುತ್ತಿಕ್ಕುವವರನ್ನು ವಿರೋಧಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಮರೆತಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಶಕ್ತಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಮಹಿಳೆಯರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೆ, ಮತ್ತೊಂದು ಕಡೆ ಗ್ರಾಮೀಣ ಭಾಗದಲ್ಲಿ ಸಾವಿರಾರು ಬಸ್ ಗಳು ಓಡಾಟ ನಿಲ್ಲಿಸಿವೆ ಎಂದರು.