ದಲಿತ ಎಂಬ ಕಾರಣಕ್ಕೆ ಪ್ರತ್ಯೇಕ ಕುರ್ಚಿ
Thursday, April 10, 2025
ಲೋಕಬಂಧು ನ್ಯೂಸ್
ಉಡುಪಿ: ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಪ್ರಾರ್ಥನಾ ಸಭೆಯ ಸೋಫಾದಲ್ಲಿ ಎಐಸಿಸಿ ಅಧ್ಯಕ್ಷರಿಗೆ ಸ್ಥಾನ ಇಲ್ಲ. ಕಾಂಗ್ರೆಸ್ನ ಅತ್ಯುನ್ನತ ನಾಯಕನನ್ನು ದಲಿತ ಎಂಬ ಕಾರಣಕ್ಕೆ ಪ್ರತ್ಯೇಕವಾಗಿ, ಬದಿಯಲ್ಲಿ ಕುರ್ಚಿಯಲ್ಲಿ ಕೂರಿಸಲಾಗಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದರು.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ಸಮಾವೇಶದಲ್ಲಿ ಸೆಂಟರ್ ಫ್ರೇಮ್ ನಲ್ಲಿ ಸೋನಿಯಾ, ರಾಹುಲ್ ಇದ್ದು, ಖರ್ಗೆಯವರನ್ನು ಸೈಡ್ ಲೈನ್ ಮಾಡಲಾಗಿದೆ.
ರಾಷ್ಟ್ರೀಯ ಅಧ್ಯಕ್ಷರ ಜೊತೆ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದನ್ನು ಗಮನಿಸಬೇಕು. ಗ್ರಾ.ಪಂ. ಅಧ್ಯಕ್ಷರಾಗಿದ್ದರೂ ಆತ ಸಭಾಂಗಣದ ಮಿಡಲ್ ಫ್ರೇಮ್ ನಲ್ಲಿರಬೇಕು. ಆದರೆ, ದಲಿತ ನಾಯಕನನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಎಂದು ವಿಷಾದಿಸಿದರು.
ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ದಲಿತ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಳ್ಳಲಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಬೆಂಕಿ ಹಾಕಿದಾಗಲೂ ಇದೇ ವರ್ತನೆಯನ್ನು ಕಾಂಗ್ರೆಸ್ ತೋರಿತ್ತು. ರಾಷ್ಟ್ರೀಯ ಅಧ್ಯಕ್ಷರಿಂದ ಕಾಲೋನಿಯ ದಲಿತ ಬಂಧುವಿನ ವರೆಗೆ ಕಾಂಗ್ರೆಸ್ ಇದೇ ಧೋರಣೆ ತಾಳುತ್ತಿದೆ.
ದಲಿತರ ತುಷ್ಟೀಕರಣ ಮಾಡಿದೆಯೇ ಹೊರತು, ದಲಿತರ ಉದ್ಧಾರವನ್ನು ಕಾಂಗ್ರೆಸ್ ಮಾಡಿಲ್ಲ. ಅಂಬೇಡ್ಕರ್ ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಖರ್ಗೆ ಸ್ವಾಭಿಮಾನ ಇದ್ದಿದ್ದರೆ ಅಧಿವೇಶನದಿಂದ ಎದ್ದು ಬರಬೇಕಾಗಿತ್ತು. ಸೋಫಾದಲ್ಲಿ ಕೂರಲು ಬಿಟ್ಟಿಲ್ಲ, ಮರದ ಕುರ್ಚಿಯಲ್ಲಿ ಮೂಲೆಯಲ್ಲಿ ಕೂರಿಸಿದ್ದಾರೆ ಎಂದರು.
ಆಡಳಿತ ರಂಗದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೇ ಈ ಸರಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ಮಾನ, ಮರ್ಯಾದೆ ಇದ್ದರೆ ಎಐಸಿಸಿ ಅಧಿವೇಶನದಲ್ಲಿ ರಾಜೀನಾಮೆ ಕೊಡಬೇಕಿತ್ತು. ಆರ್ಥಿಕ ವರ್ಷದ ಬಜೆಟ್ ರೆಡಿ ಮಾಡಿದವರು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಹೊಗಳಿಕೆ ಮಾತಾಡಿದ್ದಾರೆ ಎಂದು ಸುನಿಲ್ ಟೀಕಿಸಿದರು.
ಸಚಿವ ಸುಧಾಕರ್ ಎರಡು ವರ್ಷದ ನಂತರ ಸರ್ಕಾರ ಈಗ ಟೇಕಾಫ್ ಆಗಿದೆ ಎಂದಿದ್ದಾರೆ. ದಲಿತರ ಹಣವನ್ನು ಮಿಸ್ ಯೂಸ್ ಮಾಡಿದ ಸರ್ಕಾರ ಇದು. ಮುಸ್ಲಿಮರನ್ನು ಮಾತ್ರ ಓಲೈಕೆ ಮಾಡುವ ಸರ್ಕಾರ ಇದಾಗಿದ್ದು, ಬೆಲೆ ಏರಿಕೆ ಮಾಡಿರುವುದರಲ್ಲಿ ಗರಿಷ್ಠ ಪ್ರಮಾಣವನ್ನು ಕಾಂಗ್ರೆಸ್ ಸರ್ಕಾರ ಮೀರಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೆಲೆ ಜಾಸ್ತಿ ಮಾಡಿದೆ ಎಂದರು.
ರಾಜ್ಯದ ಜಾತಿ ಗಣತಿ ವರದಿ ಕ್ಯಾಬಿನೆಟ್ ನಲ್ಲಿ ತರುವ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ನಾನು ಮಾಧ್ಯಮಗಳಲ್ಲಿ ಗಮನಿಸಿದ್ದು, ಕಾಂತರಾಜ್ ವರದಿ ಜಾರಿಗೆ ತರುತ್ತೀರೋ? ಜಯಪ್ರಕಾಶ್ ಹೆಗ್ಡೆ ವರದಿ ಜಾರಿಗೆ ತರುತ್ತೀರೋ? ಎರಡು ವರದಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ಕೊಡಬೇಕು. ಸಿದ್ದರಾಮಯ್ಯ ವಿಭಿನ್ನ ಧೋರಣೆಗಳನ್ನು ಜನ ದೀರ್ಘಕಾಲ ನಂಬುವುದಿಲ್ಲ ಎಂದರು.