ಪೋಲಿಸ್ ದಬ್ಬಾಳಿಕೆಗೆ ಹೆದರಬೇಕಿಲ್ಲ
Friday, April 11, 2025
ಲೋಕಬಂಧು ನ್ಯೂಸ್
ಉಡುಪಿ: ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿ ಕಾರ್ಯಕರ್ತರು, ಪತ್ರಕರ್ತರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ಕಾರ್ಯಕರ್ತರು ಪೊಲೀಸ್ ದಬ್ಬಾಳಿಕೆಗೆ ಹೆದರಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.ಗುರುವಾರ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ಸವಾಲು ಮತ್ತು ಗುರಿ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಹಿಟ್ಲರ್ ಸರ್ಕಾರಕ್ಕೆ ಬಡ್ಡಿ ಸಮೇತ ಉತ್ತರ ನೀಡೋಣ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜನಪ್ರಿಯ ಸರ್ಕಾರವಲ್ಲ, ಜಾಹಿರಾತಿನ ಸರ್ಕಾರ. ಬಡವರ ಪರ ಸರ್ಕಾರವಲ್ಲ, ಬೆಲೆ ಏರಿಕೆ ಮೂಲಕ ಬಡವರಿಗೆ ಬರೆ ಎಳೆದ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ.
ಹಿಂದುಳಿದವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಹಿಂದೆ ಹೋಗುತ್ತಿದ್ದಾರೆ. ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದಾಗಿ ಭಾವಿಸಿದ್ದಾರೆ ಎಂದರು.
ನಮ್ಮ ಜನಾಕ್ರೋಶ ಯಾತ್ರೆ ಯಾವುದೇ ಗಿಮಿಕ್ ಅಲ್ಲ, ಗಿಮಿಕ್ ಮಾಡುವುದಕ್ಕೆ ಈಗ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ಬೆಲೆ ಏರಿಕೆ, ಮುಸಲ್ಮಾನರ ಓಲೈಕೆ, ಎಸ್ಸಿಎಸ್ಟಿ ಅನುದಾನದ ದುರ್ಬಳಕೆ, ಭ್ರಷ್ಟಾಚಾರ ವಿರುದ್ದ ಜನತೆಗೆ ನ್ಯಾಯ ಕೊಡಿಸುವುದೇ ಈ ಯಾತ್ರೆಯ ಉದ್ದೇಶ ಎಂದರು.
ಸಿದ್ದರಾಮಯ್ಯ ಚುನಾವಣೆಗೆ ಮೊದಲು ಕೃಷ್ಣೆ ಕಡೆಗೆ ಪಾದಯಾತ್ರೆ ಮಾಡಿದರು, ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಇಬ್ಬರಿಗೂ ರಾಜ್ಯಕ್ಕೆ ಒಂದೇ ಒಂದು ನೀರಾವರಿ ಯೋಜನೆ ಕೊಡುವುದಕ್ಕಾಗಿಲ್ಲ. ಅವರು ಮಾಡಿದ್ದು ಗಿಮಿಕ್ ಯಾತ್ರೆ ಎಂದು ತಿರುಗೇಟು ನೀಡಿದರು.
ಲವ್ ಜಿಹಾದಿಗೆ ಬಲಿಯಾದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಬಜೆಟ್ ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಆತ್ಮಸಂರಕ್ಷಣೆಗೆ ಹಣ ಇಟ್ಟಿದೆ, ದೇವಾಲಯಗಳಿಗೆ ಒಂದು ನಯಾಪೈಸೆ ನೀಡಿಲ್ಲ, ಮೌಲ್ವಿಗಳ ಸಂಬಳ ಜಾಸ್ತಿ ಮಾಡಿದೆ. ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಶೇ. 4 ಮೀಸಲಾತಿ ಹೆಚ್ಚಿಸಿದೆ. ಅದರ ವಿರುದ್ಧ ಹೋರಾಟ ಮಾಡಿದ ಬಿಜೆಪಿ ಶಾಸಕರನ್ನೇ ಆರು ತಿಂಗಳು ಸಸ್ಪೆಂಡ್ ಮಾಡಿದ್ದಾರೆ. ಅವರು ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದವರು ಟೀಕಿಸಿದರು.
ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕಲಿಯಲು 30 ಲಕ್ಷ ರೂ. ನೀಡುತ್ತಾರೆ. ಬಡ ಹಿಂದೂ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲು ನಯಾಪೈಸೆ ನೀಡುತ್ತಿಲ್ಲ. 65 ವರ್ಷ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್, ಮುಸ್ಲಿಮರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಿಲ್ಲ ಎಂದರು.
ಸರಕಾರ ಉರುಳಬಹುದು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಜನಾಕ್ರೋಶ ಯಾತ್ರೆ ಮುಗಿಯುವುದರೊಳಗೆ ರಾಜ್ಯದಲ್ಲಿ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ತಾರಕಕ್ಕೇರಿ ಸರ್ಕಾರ ಉರುಳಲೂಬಹುದು. ಬಿಜೆಪಿ ಮತ್ತೆ ಅಧಿಕಾರ ನಡೆಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‌ಗೆ ಗೊತ್ತಾಗಿದೆ
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ದಲಿತರ ಎಸ್ಟಿಪಿಸಿ ಮತ್ತು ಟಿಎಸ್ಪಿ ಅನುದಾನದಲ್ಲಿ 38 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ನಮ್ಮ ಜೇಬಿನಿಂದಲೇ ಹಣ ತೆಗೆದು ನಮಗೆ ಕೊಡುವ ಕೆಲಸ ಮಾಡುತ್ತಿದೆ. ಎಸ್ಸಿ, ಎಸ್ಟಿ ಮಕ್ಕಳಿಗೆ 2 ವರ್ಷದಿಂದ ವಿದ್ಯಾರ್ಥಿ ವೇತನ ನೀಡಿಲ್ಲ.
ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ. 4 ಮೀಸಲಾತಿಗೆ ಸಂವಿಧಾನ ಬದಲಾಯಿಸುವ ಮಟ್ಟಕ್ಕೆ ಕಾಂಗ್ರೆಸ್ ಓಲೈಕೆಯಲ್ಲಿ ತೊಡಗಿದೆ. ಕಾಂಗ್ರೆಸ್ ನವರಿಗೆ ಸರ್ಕಾರದ ಅವಧಿ ಇನ್ನೂ 3 ವರ್ಷ ಇರುವಾಗಲೇ ತಾವು ಮತ್ತೆ ಅಧಿಕಾರಕ್ಕೆ ಖಂಡಿತಾ ಬರುವುದಿಲ್ಲ. ಆದ್ದರಿಂದ ಬೇಕಾದಷ್ಟು ಇಷ್ಟಾಚಾರ, ಭ್ರಷ್ಟಾಚಾರ ನಡೆಸೋಣ ಎಂದು ಹೊರಟಿದ್ದಾರೆ ಎಂದು ಟೀಕಿಸಿದರು.
ಭ್ರಷ್ಟಾಚಾರಕ್ಕೂ ಸ್ಪರ್ಧೆ!
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಮೂಕ, ಕಿವುಡ, ಕುರುಡ ಸರ್ಕಾರ ಇದೆ. ಜಾಸ್ತಿ ವಸೂಲಿ ಮಾಡಿ ಹೈಕಮಾಂಡ್ ಗೆ ಹೆಚ್ಚು ಕೊಡುವವರನ್ನು ಮಂತ್ರಿಗಳನ್ನಾಗಿ ಮಾಡಲಾಗಿದೆ. ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಮಾಡುವುದಕ್ಕೂ ಸ್ಪರ್ಧೆ ಏರ್ಪಟ್ಟಿದೆ ಎಂದು ಲೇವಡಿ ಮಾಡಿದರು.
ನಟ್ ಬೋಲ್ಟ್ ಟೈಟ್ ಮಾಡಬೇಕು
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗಟ್ಟಲಾಗುತ್ತಿದೆ. ಕರಾವಳಿಯ ಜಿಲ್ಲೆಗಳಿಗೆ ಅನುದಾನ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರಿ ಇಲಾಖೆಗಳ ನಟ್ ಬೋಲ್ಟುಗಳನ್ನು ಟೈಟ್ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕರಾದ ವಿ. ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜಾ, ಗುರುರಾಜ ಗಂಟಿಹೊಳೆ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ವಿ.ಪ. ಸದಸ್ಯರಾದ ರವಿಕುಮಾರ್, ಕಿಶೋರ್ ಕುಮಾರ್ ಪುತ್ತೂರು ಮತ್ತು ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪಕ್ಷ ನಾಯಕರಾದ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ರಾಜೀವ್ ಕುಲಾಲ್, ನವೀನ್ ನಾಯಕ್, ಪ್ರಭಾಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ, ವೀಣಾ ಶೆಟ್ಟಿ ಮೊದಲಾದವರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿ, ರೇಶ್ಮಾ ಉದಯ ಶೆಟ್ಟಿ ವಂದಿಸಿದರು. ಪ್ರಸಾದ್ ಶೆಟ್ಟಿ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.
ಎತ್ತಿನಗಾಡಿ ಮೆರವಣಿಗೆ
ಜನಾಕ್ರೋಶ ಯಾತ್ರೆ ಅಂಗವಾಗಿ ಕಲ್ಸಂಕದಿಂದ ಕಡಿಯಾಳಿ ಬಿಜೆಪಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಬಿ.ವೈ. ವಿಜಯೆಂದ್ರ ಎತ್ತಿಗಾಡಿಯಲ್ಲಿ ಕುಳಿತು ಸ್ವಲ್ಪ ದೂರ ಸಾಗಿ, ನಂತರ ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಸಾಗಿದರು.