ಕಾರ್ಮಿಕರ ಘನತೆ ಗೌರವ ಗುರುತಿಸುವುದು ಕಾರ್ಮಿಕ ದಿನಾಚರಣೆ ಆಶಯ
Thursday, May 1, 2025
ಲೋಕಬಂಧು ನ್ಯೂಸ್
ಉಡುಪಿ: ಕಾರ್ಮಿಕರ ಘನತೆ ಮತ್ತು ಗೌರವವನ್ನು ಗುರುತಿಸುವುದು ಕಾರ್ಮಿಕ ದಿನಾಚರಣೆಯ ಮೂಲ ಉದ್ದೇಶ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.
ಗುರುವಾರ ತೊಟ್ಟಂ ಚರ್ಚ್ ಸಭಾಂಗಣದಲ್ಲಿ ಶ್ರೀಸಾಮಾನ್ಯ, ಕಾರ್ಮಿಕ ಹಾಗೂ ವಲಸೆ ಕಾರ್ಮಿಕರ ಆಯೋಗ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಮಾಡುವ ಕೆಲಸವೂ ಕೂಡ ಪವಿತ್ರವಾದುದು. ಅವರು ಸೂಕ್ತ ವೇತನ ಪಡೆಯುವ ಹಕ್ಕು ಹೊಂದಿರುತ್ತಾರೆ. ರೊಬೊಟಿಕ್ ಯುಗದಲ್ಲಿ ಮನುಷ್ಯನಲ್ಲಿ ಆಲಸ್ಯತನ ಹೆಚ್ಚಾಗುತ್ತಿದ್ದು, ಯಾವುದೇ ರೀತಿಯ ಕೃತಕ ಬುದ್ದಿಮತ್ತೆ ಬಂದರೂ ಅದನ್ನು ನಿರ್ಮಾಣ ಮಾಡಿರುವುದು ಮನುಷ್ಯ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಕೆಳಹಂತದ ಕಾರ್ಮಿಕನಿಂದ ಹಿಡಿದು ಮೇಲ್ವರ್ಗದ ಕಾರ್ಮಿಕನೂ ಸಮಾನ ಗೌರವಕ್ಕೆ ಅರ್ಹರು ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪಿ.ಆರ್.ಯೋಗೇಶ್ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹ್ಮದ್ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಲಭಿಸುವ ವಿವಿಧ ಯೋಜನೆಗಳ ಮಾಹಿತಿ ನೀಡಿದರೆ, ಉದ್ಯಮಿ ಆಲ್ವಿನ್ ಕ್ವಾಡ್ರಸ್ ಸ್ವಉದ್ಯೋಗದ ವಿವರಣೆ ನೀಡಿದರು.
ಕುಂದಾಪುರ ವಿಭಾಗ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ., ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸುನಿಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಷ್ಮಾ ಮೊದಲಾದವರಿದ್ದರು.
ವೀಣಾ ಫೆರ್ನಾಂಡಿಸ್ ಸ್ವಾಗತಿಸಿ, ವಿಕ್ಟರ್ ಮಿನೇಜಸ್ ವಂದಿಸಿದರು. ಶಾಂತಿ ಪಿಕಾರ್ಡೊ ನಿರೂಪಿಸಿದರು.