
ಮೀಸಲಾತಿ: ಕೇಂದ್ರದ ನಿರ್ಧಾರ ಸಂತಸದಾಯಕ
Thursday, May 1, 2025
ಲೋಕಬಂಧು ನ್ಯೂಸ್
ಉಡುಪಿ: ಜಾತಿ- ಜನಗಣತಿಯಿಂದ ಮೀಸಲಾತಿ ಕೊಡುವುದು ಕಷ್ಟ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತಿಳಿದರೆ ಮೀಸಲಾತಿ ಕೊಡುವುದು ಸುಲಭ. ಯಾರನ್ನು ಯಾವ ಪ್ರವರ್ಗಕ್ಕೆ ಹಾಕಬಹುದು ಎಂದು ನಿರ್ಧರಿಸಬಹುದು. ಈ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನ ಖುಷಿಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ಹೈಕಮಾಂಡ್ ಒಪ್ಪಿದಾಗ ರಾಜ್ಯ ಬಿಜೆಪಿ ಒಪ್ಪಲೇಬೇಕು. ಕೇಂದ್ರ ಸರ್ಕಾರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡಾಗಿದೆ. ಬಹಳ ಸಮಯದಿಂದ ರಾಹುಲ್ ಗಾಂಧಿ ಇದನ್ನೇ ಒತ್ತಾಯ ಮಾಡುತ್ತಿದ್ದರು ಎಂದರು.
ಕೇಂದ್ರದ ಜನಗಣತಿ ವರದಿ ಬಂದ ಬಳಿಕ ಸಮರ್ಪಕ ವರದಿ ಹೊರಬೀಳಲಿದೆ ಎಂಬ ಬಿಜೆಪಿಯವರ ಅಭಿಪ್ರಾಯದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ. ವೈಜ್ಞಾನಿಕ ಅಲ್ಲ ಎಂಬುದಕ್ಕೆ ಕಾರಣ, ದಾಖಲೆ ಕೊಡಬೇಕಾಗುತ್ತದೆ.
ಜಯಪ್ರಕಾಶ್ ಹೆಗ್ಡೆ ಸಮೀಕ್ಷಾ ವರದಿಯನ್ನು ಸದನದ ಮುಂದೆ ಮಂಡಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದರು. ಆದರೆ, ಬಿಜೆಪಿಯವರು ನಮ್ಮ ಸಮೀಕ್ಷಾ ವರದಿಯನ್ನು ತೆಗೆದುಕೊಳ್ಳಲೇ ಇಲ್ಲ. ವರದಿಯನ್ನು ತೆಗೆದುಕೊಂಡಿದ್ದರೆ ನಾವು ಅವತ್ತೇ ಸರಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೆವು ಎನ್ನುತ್ತಿದ್ದಾರೆ.
ಕಾಂತರಾಜು ಸಂಗ್ರಹಿಸಿದ ದತ್ತಾಂಶದ ಮೇಲೆ ನಾವು ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಕ್ಯಾಬಿನೆಟ್ ಮುಂದೆ ಈ ವರದಿಯನ್ನು ತೆಗೆದುಕೊಂಡು ಹೋಗಿದ್ದಾರೆ, ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ರಾಜ್ಯದ ಜಾತಿ ಗಣತಿ ವರದಿ ಬಗ್ಗೆ ಕ್ಯಾಬಿನೆಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡೋಣ ಎಂದರು.
2011ರಲ್ಲಿ ದೇಶದಲ್ಲಿ ಜನಗಣತಿಯಾಗಿತ್ತು. ಈಗ 2025ರಲ್ಲಿ ಆಗುತ್ತಿದೆ. ಈ ಅವಧಿಯಲ್ಲಿ ಅದೆಷ್ಟೋ ಚುನಾವಣೆಗಳು ನಡೆದು ಹೋಗಿದೆ. ವರದಿ ಬೇಗ ಬಿಡುಗಡೆ ಆಗಲಿ ಎಂಬುದು ನಮ್ಮ ಅಭಿಪ್ರಾಯವಾಗಿದ್ದು, ನಮ್ಮ ಜವಾಬ್ದಾರಿ ನಿರ್ವಹಿಸಿದ್ದೇವೆ. ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರ. ವರದಿ ಮಂಡನೆ ಆಗಲಿ ಎಂಬುದು ನಮ್ಮ ಅಭಿಪ್ರಾಯ. ಅದಕ್ಕಾಗಿ ಕಾಯುತ್ತಿದ್ದೇವೆ. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟು ವರದಿ ಸ್ವೀಕಾರ ಮಾಡಿದರೆ ಸರಕಾರಕ್ಕೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ರಾಜ್ಯಗಳು ಕರ್ನಾಟಕ ಮಾದರಿಯ ಗಣತಿ ಮಾಡಬೇಕು ಎಂಬುದು ನನ್ನ ಆಕಾಂಕ್ಷೆ ಎಂದರು.
ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸ್ಥಿತಿಗತಿ ಬಹಿರಂಗ ಆಗಬೇಕು. ಸಣ್ಣಪುಟ್ಟ ಜಾತಿಯವರಿಗೂ ಸೌಲಭ್ಯಗಳು ಸಿಗಬೇಕು. ಸಮಸಮಾಜ ನಿರ್ಮಾಣ ಮಾಡಲು ವರದಿ ಜಾರಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಜಾತಿ ಗಣತಿಯಲ್ಲಿ ಯಾವ ವಿಭಾಗವನ್ನೆಲ್ಲ ಸರ್ವೇ ಮಾಡುತ್ತದೆ ಎಂದು ನೋಡಬೇಕು. ನಮ್ಮ, ಅವರ ಗಣತಿಯಲ್ಲಿ ವ್ಯತ್ಯಾಸಗಳಿದ್ದರೆ ಅಪ್ಡೇಟ್ ಮಾಡಲು ಅವಕಾಶ ಇದೆ. ನಮ್ಮ ವರದಿಯನ್ನು ಸ್ವೀಕಾರ ಮಾಡಿದರೆ ಯಾವ ಜಾತಿಯೂ ತಪ್ಪಿ ಹೋಗುವುದಿಲ್ಲ ಎಂದರು.
ಪೆಹೆಲ್ಗಾಮ್ ವಿಚಾರದಲ್ಲಿ ದೇಶ ಒಂದಾಗಿದೆ
ಪೆಹಲ್ಗಾಮ್ ಘಟನೆ ಬಗ್ಗೆ ವಿರೋಧ ಪಕ್ಷಗಳೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ಇಡೀ ದೇಶ ಒಂದಾಗಿದೆ. ಪೆಹಲ್ಗಾಮ್ ನಲ್ಲಿ ಆದ ನೋವು ಆ ಕುಟುಂಬಗಳಿಗೆ ಮಾತ್ರ ಅಲ್ಲ, ಇಡೀ ದೇಶಕ್ಕೆ ನೋವಾಗಿದೆ ಎಂದು ಜಯಪ್ರಕಾಶ ಹೆಗ್ಡೆ ಹೇಳಿದರು.
ಕುಟುಂಬಸ್ಥರ ಹೇಳಿಕೆಗಳನ್ನು ಟೀಕೆ ಮಾಡುವುದು ಸರಿಯಲ್ಲ, ಘಟನೆ ಬಗ್ಗೆ ಹೀಗೆ ಆಗಿದೆ ಎಂಬ ಸ್ಕ್ರಿಪ್ಟ್ ಕೊಡುವ ಪರಿಸ್ಥಿತಿ ಬರಬಾರದು. ಪ್ರತ್ಯಕ್ಷ ಘಟನೆಯನ್ನು ಕುಟುಂಬಗಳು ವಿವರಿಸಿವೆ. ಅದನ್ನು ಯಾರೂ ಟೀಕೆ ಮಾಡಬಾರದು. ಅಲ್ಲಿಯ ಭದ್ರತೆ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು. ಪ್ರವಾಸಿಗರು ಇಲ್ಲದಿದ್ದರೆ ಆ ಭಾಗದಲ್ಲಿ ಭದ್ರತೆ ಬೇಡವೆ ಎಂದು ಪ್ರಶ್ನಿಸಿದರು. ಪ್ರವಾಸಿಗರು ಹೋಗಲಿ, ಹೋಗದಿರಲಿ ಪಾಕಿಸ್ತಾನದ ಗಡಿಯಲ್ಲಿ ಭದ್ರತೆ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ.
ಪಾಕಿಸ್ತಾನದವರನ್ನು ಗುರುತಿಸಿ ವಾಪಸ್ ಕಳುಹಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಎಲ್ಲಾ ರಾಜ್ಯದಿಂದಲೂ ಗುರುತಿಸಿ ವಾಪಸ್ ಕಳುಹಿಸಬೇಕಾಗುತ್ತದೆ.
ಅಗತ್ಯವಿದ್ದಲ್ಲಿ ಯುದ್ಧ ಆಗಬೇಕಾಗುತ್ತದೆ. ಯುದ್ಧವಿಲ್ಲದೆ ಬೇರೆ ರೀತಿಯಲ್ಲಿ ಟ್ಯಾಕಲ್ ಮಾಡಲು ಸಾಧ್ಯವಾಗುವುದಾದರೆ ಮಾಡಬೇಕು. ಯುದ್ಧ ಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರ. ಮುಖ್ಯಮಂತ್ರಿ ಮಾತ್ರ ಅಲ್ಲ. ಪೇಜಾವರ ಸ್ವಾಮೀಜಿ ಅದನ್ನೇ ಹೇಳಿದ್ದಾರೆ. ಯುದ್ಧ ಅಗತ್ಯ ಇದೆಯೋ ಇಲ್ಲವೋ ಎಂಬುದನ್ನು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೆಗ್ಡೆ ಹೇಳಿದರು.