
ಜನಗಣತಿಯ ಕೇಂದ್ರ ಆದೇಶ ಸಣ್ಣ ಸಮುದಾಯಕ್ಕೆ ಶಕ್ತಿ
Thursday, May 1, 2025
ಲೋಕಬಂಧು ನ್ಯೂಸ್
ಉಡುಪಿ: ದೇಶದಲ್ಲಿ ಜನಗಣತಿ- ಜಾತಿಗಣತಿಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಪ.ಜಾತಿ, ಪ. ಪಂಗಡ, ಹಿಂದುಳಿದ ಸಣ್ಣ ಸಮುದಾಯಕ್ಕೆ ಹೊಸ ಶಕ್ತಿ ಕೊಡುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಪತ್ರಕರ್ತರ ಜೊತೆ ಮಾತನಾಡಿ, ಸಮಾಜದಲ್ಲಿ ಶಕ್ತಿ ಪ್ರದರ್ಶನ ಮಾಡಲು ಅಸಾಧ್ಯವಾದ ಸಣ್ಣ ಸಮುದಾಯಗಳಿಗೆ ಹೊಸ ಶಕ್ತಿ ಕೊಟ್ಟಿದೆ. ಇಡೀ ದೇಶದ ಹಿಂದುಳಿದ ವರ್ಗದವರೂ ಸೇರಿದಂತೆ ಎಲ್ಲ ಸಮುದಾಯದವರು ಒಟ್ಟಾಗಿ ಸ್ವಾಗತ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ಗಣತಿಯಿಂದ ನಿಖರ ಅಂಕೆಸಂಖ್ಯೆ ಮತ್ತು ವಿವರ ಸಿಗಲಿದ್ದು, ಶಕ್ತಿ ಇಲ್ಲದಿರುವ ಸಣ್ಣ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುತ್ತದೆ. ಸಮಬಾಳು, ಸಮಪಾಲಿಗೆ ಅವಕಾಶವಾಗುತ್ತದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪ್ರೀತಿಯ ಧನ್ಯವಾದಗಳು ಎಂದರು.
ಕೇಂದ್ರದ ಆದೇಶದ ನಂತರ ಸಿಎಂ ಸಿದ್ದರಾಮಯ್ಯ ಸ್ವಾಗತದ ಹಿನ್ನೆಲೆಯನ್ನು ಗಮನಿಸಿ, ತಾನು ಮಾಡಿರುವುದು ಜಾತಿ ಗಣತಿ ಎಂದು ಹೇಳಿಲ್ಲ. ಜನಗಣತಿ, ಆರ್ಥಿಕ ಮತ್ತು ಸಾಮಾಜಿಕ ಗಣತಿ ಪ್ರಗತಿಯ ಆದೇಶ ಅದಾಗಿದ್ದು, ರಾಜ್ಯ ಗಣತಿಯಲ್ಲಿ ಜಾತಿ ಯಾವುದು ಎಂಬ ಒಂದು ಪ್ರಶ್ನೆ ಮಾತ್ರ ಅಲ್ಲಿತ್ತು. ಹತ್ತು ವರ್ಷದಿಂದ ಗಣತಿ ನಡೆದದ್ದು ಬಿಟ್ಟರೆ ಅದರ ಪ್ರಕಟಣೆ ಆಗಿಲ್ಲ ಎಂದು ಟೀಕಿಸಿದರು.
ಕುರ್ಚಿ ಗಂಡಾಂತರ ಬಂದಾಗೆಲ್ಲ ಗಣತಿಯ ವಿವರ ನೀಡುತ್ತೇವೆ ಎಂದು ಹೇಳುತ್ತಾ ಬಂದಿದ್ದರು. ಕೇಂದ್ರ ಸರ್ಕಾರ ನೇರವಾಗಿ ಜಾತಿ ಗಣತಿಗೆ ನಿರ್ದೇಶನ ಕೊಟ್ಟಿದ್ದು, ತಮ್ಮ ವರದಿಯನ್ನು ಇಟ್ಟುಕೊಂಡು ಏನು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಸಿಎಂ ಸಿದ್ದರಾಮಯ್ಯ ಬಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೇಂದ್ರ ಸರ್ಕಾರದ ಆದೇಶ ಸ್ವಾಗತಿಸುವುದು ಅನಿವಾರ್ಯವಾಗಿದೆ ಎಂದರು.
ತಮ್ಮ ವರದಿಯ ಮಾಹಿತಿಯನ್ನು ಈಗ ಬಿಡುತ್ತೇವೆ, ಮತ್ತೆ ಬಿಡುತ್ತೇವೆ ಎಂದು ಹೆದರಿಸುವ ಪರಿಪಾಠ ಇನ್ನು ನಡೆಯದು. ಕೇಂದ್ರ ಸರ್ಕಾರದ ಜಾತಿಗಣತಿ ಹಿಂದುಳಿದ ವರ್ಗಕ್ಕೆ ಹೊಸ ಶಕ್ತಿ ಕೊಡುತ್ತದೆ. ರಾಹುಲ್ ಗಾಂಧಿ ಕೇಂದ್ರವನ್ನು ಆಗ್ರಹ ಮಾಡುತ್ತಿದ್ದದ್ದು ಸತ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಏನೂ ಮಾಡಿಲ್ಲವೆಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದರು. ನಾವು ಹೇಳಿ ಮಾಡಿದರು ಎಂಬ ಭಾವನೆ ಸರಿಯಲ್ಲ ಎಂದರು.
ರಾಜ್ಯದ ಜಾತಿಗಣತಿ ವಿವಾದ ಒಂದು ರೀತಿಯಲ್ಲಿ ಪರಿಹಾರವಾಗಿದೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಆದೇಶ ಎಂಬ ಚರ್ಚೆಯಿದ್ದು, ಭಾರತದಂಥ ದೊಡ್ಡ ದೇಶದಲ್ಲಿ ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ ಎಂದರು.
ಕೆಟ್ಟ ಪರಂಪರೆ
ಪೆಹೆಲ್ಗಾಮ್ ನಲ್ಲಿ ನೀನು ಹಿಂದುವೇ ಎಂದು ಕೇಳಿ ಜಿಹಾದಿಗಳು ನರಮೇಧ ನಡೆಸಿದ್ದಾರೆ. ಕೆಟ್ಟ ಪರಂಪರೆಯನ್ನು ಭಯೋತ್ಪಾದಕರು ಹುಟ್ಟು ಹಾಕಿದ್ದು, ದೇಶದ ನಿರ್ಧಾರ ಸಾರ್ವತ್ರಿಕವಾಗಿ ಹೇಳಿ ಮಾಡುವುದಿಲ್ಲ. ಗುಪ್ತವಾಗಿ ಕ್ರಮಗಳು ನಡೆಯುತ್ತಿರುತ್ತದೆ. ದೇಶದ ಹಿತದೃಷ್ಟಿಯಿಂದ ಮೋದಿ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಪಂಚ ಸ್ವಾಗತಿಸುತ್ತದೆ. ಅದಕ್ಕೂ ಪ್ರಚಾರ ಬಯಸುವ ವಿದ್ಯಮಾನ ಮೋದಿ ಕಾಲಘಟ್ಟದಲ್ಲಿಲ್ಲ ಎಂದರು.
ಭಾರತದ ಬಲಿಷ್ಠತೆ ನಾಯಕತ್ವ, ಇಚ್ಛಾಶಕ್ತಿ ಗಮನದಲ್ಲಿಟ್ಟುಕೊಂಡು ಪಾಕ್ ರಕ್ಷಣಾ ಮಂತ್ರಿ ನಮ್ಮನ್ನು ಅಲ್ಲಾಹು ಕಾಪಾಡಬೇಕು ಎಂಬ ಹೇಳಿಕೆ ಕೊಟ್ಟಿರಬಹುದು. ಈ ಸಂದರ್ಭದಲ್ಲಿ ಯಾರಿಗೂ ನಾನು ಅಪಮಾನ ಮಾಡುವುದಿಲ್ಲ, ಯಾರನ್ನೂ ಹೀಯಾಳಿಸುವ ಆವಶ್ಯಕತೆಯಿಲ್ಲ. ಭಾರತ ಬಲಿಷ್ಠವಾಗಿದೆ, ಬಹಳ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತದೆ. ದೇಶದ ಜನರ ರಕ್ಷಣೆಗೆ ಬದ್ಧವಾಗಿರುತ್ತದೆ ಎಂಬುದು ಪಾಕ್ ಗೆ ಗೊತ್ತಾಗಿದೆ ಎಂದು ಸಂಸದ ಕೋಟ ತಿಳಿಸಿದರು.
ಪಾಕಿಸ್ತಾನ ಪರ ಘೋಷಣೆ ಮಂಗಳೂರಿನಲ್ಲಿ ಯುವಕನ ಹತ್ಯೆ ವಿಚಾರದಲ್ಲಿ ಮಾತನಾಡಿದ ಕೋಟ ಯಾರದ್ದೇ ಹತ್ಯೆ, ಯಾರನ್ನೇ ಹಿಂಸೆ ಯಾರೇ ಮಾಡಿದರೂ ಅದು ಅಪರಾಧ. ಈ ವಿಚಾರದಲ್ಲಿ ಮತ್ತೊಂದು ವಾದ ಇಲ್ಲ. ಆಗಬೇಕಾದ ಕಾನೂನು ಕ್ರಮ ಖಂಡಿತ ಆಗುತ್ತದೆ.
ಭಾರತದ ನೆಲದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಎನ್ನುವ ಕೆಟ್ಟ ಪರಂಪರೆ ಸಂಪೂರ್ಣ ನಿಲ್ಲಬೇಕು. ಸ್ವತಃ ಸಿದ್ದರಾಮಯ್ಯ ಅಂಥವರಿಗೆ ರಕ್ಷಣೆ ಇಲ್ಲ ಎಂದು ಹೇಳಿದ್ದು, ಯಾರ ಹತ್ಯೆಯನ್ನು ಕೂಡ ನಾಗರಿಕ ಸಮಾಜ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಯಾವುದೇ ರೀತಿಯ ಹತ್ಯೆಗಳು ನಡೆದರೂ ಅದು ಖಂಡನೀಯ. ಬಿಜೆಪಿ ಹತ್ಯೆ ಹಿಂಸೆಯನ್ನು ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದರು.