.jpg)
ಡಲ್ಲಾಸ್ ಪುತ್ತಿಗೆ ಮಠದಲ್ಲಿ ಪ್ರತಿಷ್ಠೆಗೊಳ್ಳುವ ಕೃಷ್ಣ ಮೂರ್ತಿ ಹಸ್ತಾಂತರ
Friday, July 4, 2025
ಲೋಕಬಂಧು ನ್ಯೂಸ್, ಉಡುಪಿ
ಭಾರತೀಯ ಸನಾತನ ಸಂಸ್ಕೃತಿಯ ಪ್ರಚಾರದ ಅಂಗವಾಗಿ ವಿಶ್ವಾದ್ಯಂತ ಶ್ರೀಕೃಷ್ಣ ಮಂದಿರ ಸ್ಥಾಪಿಸಿರುವ ಪ್ರಸಕ್ತದ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಅಮೆರಿಕಾದ ಡಲ್ಲಾಸ್ ಮಹಾನಗರದ ಪುತ್ತಿಗೆ ಶಾಖಾ ಮಠದಲ್ಲಿ ಪ್ರತಿಷ್ಠಾಪನೆಗಾಗಿ ನಿರ್ಮಿಸಲಾದ ಸುಂದರವಾದ ಶ್ರೀಕೃಷ್ಣನ ಮೂರ್ತಿ ಸಿದ್ದಗೊಂಡಿದೆ.
ಕಡೂರಿನ ಶಿಲ್ಪಿ ತೀರ್ಥರಾಜ್ ಮತ್ತವರ ತಂಡದವರು ಸಿದ್ಧಪಡಿಸಿದ ಮೂರ್ತಿಯನ್ನು ಮುಖ್ಯಪ್ರಾಣ ದೇವರ ಸಹಿತವಾಗಿ ಶುಕ್ರವಾರ ಗೀತಾ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುತ್ತಿಗೆ ಶ್ರೀಪಾದರಿಗೆ ಹಸ್ತಾಂತರಿಸಿದರು.
ತಮ್ಮ ಪರ್ಯಾಯದ ಬಳಿಕ ಈ ಮೂರ್ತಿಗಳನ್ನು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಧ್ಯುಕ್ತವಾಗಿ ಪ್ರತಿಷ್ಠಾಪನೆ ಮಾಡಲಿದ್ದು, ಅಲ್ಲಿಯ ವರೆಗೆ ಈ ಎರಡೂ ಮೂರ್ತಿಗಳು ಗೀತಾ ಮಂದಿರದಲ್ಲಿ ಇರಲಿವೆ.
ಶ್ರೀಪಾದರು ಶಿಲ್ಪಿಗಳಿಗೆ ಶ್ರೀಕೃಷ್ಣ ಪ್ರಸಾದ ನೀಡಿ ಹರಸಿದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಅಮೆರಿಕದ ಡಲ್ಲಾಸ್ ನಗರದ ಪುತ್ತಿಗೆ ಶಾಖಾ ಮಠದ ಪ್ರಧಾನ ಅರ್ಚಕ ವಾದಿರಾಜ ಭಟ್ ಕುಕ್ಕೆಹಳ್ಳಿ ವಂದಿಸಿದರು.
ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಮೊದಲಾದವರಿದ್ದರು.
ಪೇಜಾವರ ಶ್ರೀಪಾದರ 5ನೇ ಪರ್ಯಾಯ ಸಂದರ್ಭದಲ್ಲಿ ನ್ಯೂಜೆರ್ಸಿಯ ಶ್ರೀಕೃಷ್ಣ ಮಂದಿರದ ಕೃಷ್ಣ ಮೂರ್ತಿಯನ್ನು ಪೇಜಾವರ ಶ್ರೀಗಳು ಉಡುಪಿಯಲ್ಲಿ ಸ್ವೀಕರಿಸಿ, ಪುತ್ತಿಗೆ ಶ್ರೀಪಾದರು ಪ್ರತಿಷ್ಠಾಪನೆ ಮಾಡಿದ್ದನ್ನಿಲ್ಲಿ ಸ್ಮರಿಸಬಹುದು.