-->
Malpe: ಕಾಡುತ್ತಿರುವ ಹವಾಮಾನ ವೈಪರೀತ್ಯ-ಕಡಲ ಮಕ್ಕಳಿಂದ  ಬೊಬ್ಬರ್ಯಗೆ ಮೊರೆ

Malpe: ಕಾಡುತ್ತಿರುವ ಹವಾಮಾನ ವೈಪರೀತ್ಯ-ಕಡಲ ಮಕ್ಕಳಿಂದ ಬೊಬ್ಬರ್ಯಗೆ ಮೊರೆ

ಲೋಕಬಂಧು ನ್ಯೂಸ್, ಉಡುಪಿ
ಕಳೆದ ಸುಮಾರು ಎರಡು ತಿಂಗಳಿಂದ ರಾಜ್ಯದ ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಜನರನ್ನು ಕಾಡುತ್ತಿದೆ. ಕಡಲನ್ನೇ ನಂಬಿದ ಸಣ್ಣಪುಟ್ಟ ದೋಣಿಯವರಿಗೆ ಕಸುಬು ಇಲ್ಲದಂತಾಗಿದೆ. ಜೀವನವಿಡೀ ದೈವ ದೇವರನ್ನು ನಂಬಿ ಬದುಕುವ ಮಂದಿಗೆ ದಿಕ್ಕು ತೋಚದಂತಾಗಿದ್ದಾರೆ. ಇನ್ನುಳಿದ 25 ದಿನ ಬುಟ್ಟಿ ತುಂಬಾ ಮೀನು ಕರುಣಿಸು, ಸಾಗರದ ಅಲೆಯನ್ನು ಸೀಳಿ ಮುನ್ನಡೆಯುವ ಶಕ್ತಿ ಕೊಡು ಎಂದು ಕಡಲ ಮಕ್ಕಳು ದೈವರಾಜ ಬೊಬ್ಬರ್ಯನ ಮೊರೆ ಹೋಗಿದ್ದಾರೆ.ಮೇ 15ರ ನಂತರ ಕರ್ನಾಟಕದ ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಶುರುವಾಗಿದೆ. ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಚಂಡಮಾರುತ, ವಾಯುಭಾರ ಕುಸಿತದಿಂದ ಹವಾಮಾನ ಇಲಾಖೆಯ ಲೆಕ್ಕಾಚಾರವೇ ತಪ್ಪಿದೆ.


ನಿಯಮದ ಪ್ರಕಾರ ಜೂನ್ 1ರಿಂದ ಸಣ್ಣಪುಟ್ಟ ದೋಣಿಗಳು ಸಮುದ್ರಕ್ಕಿಳಿದು ಕಸುಬು ಮಾಡಬೇಕಿತ್ತು. ಎಲ್ಲಾ ದೋಣಿಗಳು ಸಮುದ್ರ ಇಳಿದಿಲ್ಲ. ಇಳಿದ ದೋಣಿಗಳಿಗೆ ಮೀನುಗಳು ಸಿಗುತ್ತಿಲ್ಲ. ದೋಣಿ ಮಗುಚಿ ಜೀವ ಹಾನಿಯಾಗಿದೆ.


ಮಲ್ಪೆ ಸಮೀಪದ ಕಲ್ಮಾಡಿ ಗುಡ್ಡದ ಮೇಲಿರುವ ದೈವರಾಜ ಬೊಬ್ಬರ್ಯನಿಗೆ ದರ್ಶನ ಸೇವೆ ಮಾಡಿಸಿದ್ದಾರೆ. ಜೂನ್ ತಿಂಗಳಲ್ಲಿ ನಿರಂತರ ಭಾರಿ ಮಳೆ, ಚಂಡಮಾರುತದ ಕಾರಣದಿಂದ ಮೀನುಗಳು ತೀರಕ್ಕೆ ಬಂದಿರಲಿಲ್ಲ. ಆಗಸ್ಟ್ 10ರಂದು ನಾಡದೋಣಿ ಮೀನುಗಾರಿಕೆ ಮುಕ್ತಾಯವಾಗುತ್ತದೆ. ಜುಲೈ ತಿಂಗಳಾರ್ಧ ಕಳೆದರೂ ಕಸುಬು ಆಗದ ಕಾರಣ ಎಲ್ಲಾ ನಾಡದೋಣಿ ಮೀನುಗಾರರು ಪೂಜೆ ಮಾಡಿಸಿದ್ದಾರೆ.


ದರ್ಶನ ಸೇವೆಯ ನಂತರ ನದಿ ತೀರದ ವರೆಗೆ ಪಂಜು ಹಿಡಿದು ದೈವ ಸವಾರಿ ನಡೆಯಿತು. ದೈವವನ್ನು ನದಿ ತೀರಕ್ಕೆ ಬರಮಾಡಿಕೊಂಡ ಮೀನುಗಾರರು, ಅಬ್ಬರದ ಅಂಬುವಿಗಿಳಿದು ಮೀನುಗಾರಿಕೆ ಸಂದರ್ಭ ಉತ್ತಮ ಕಸುಬು ಮತ್ತು ರಕ್ಷಣೆಗಾಗಿ ಪ್ರಾರ್ಥಿಸಿದರು.


ದೈವ ಅನುಗ್ರಹಿಸುವುದಾಗಿ ಅಭಯ ನೀಡಿದೆ.


ಕರ್ನಾಟಕ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ತಾಂತ್ರಿಕವಾಗಿ ಬಹಳ ಮುಂದುವರಿದಿದ್ದು, ಮಳೆಗಾಲದ ಆರಂಭದಲ್ಲಿ ಪುಟ್ಟ ದೋಣಿಗಳನ್ನು ಹಿಡಿದು ಕಸುಬು ಮಾಡುವ ಮಂದಿ ಅದನ್ನೇ ನಂಬಿ ಜೀವನ ಮಾಡುತ್ತಾರೆ. ದೈವದ ನುಡಿಯಂತೆ ಉಳಿದ 20 ದಿನ ದೋಣಿ ಇಳಿದು ಬುಟ್ಟಿ ತುಂಬಾ ಮೀನು ಸಿಕ್ಕರೆ ನೆಮ್ಮದಿಯ ಜೀವನ ಸಾಗಿಸುವ ನಿರೀಕ್ಷೆಯಲ್ಲಿದ್ದಾರೆ.

Ads on article

Advertise in articles 1

advertising articles 2

Advertise under the article