Moodbidri: ಅಕ್ರಮ ಮಣ್ಣು ಸಾಗಾಟ ನಿಲ್ಲಿಸಿ
Wednesday, July 23, 2025
ಲೋಕಬಂಧು ನ್ಯೂಸ್, ಮೂಡುಬಿದಿರೆ
ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ನಿಡ್ಡೋಡಿ ಕೊಲತ್ತಾರು ಪದವು ಬಳಿ, ಕೆಂಪುಕಲ್ಲು ಗಣಿಗಾರಿಕೆ ಅಕ್ರಮ ಸಾಗಾಟ ಮತ್ತು ತೆಗೆಯುವಿಕೆ ಹಾಗೂ ಅಕ್ರಮ ಮಣ್ಣು ಸಾಗಾಟದಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ಗ್ರಾಮಸ್ಥರು ನಿಡ್ಡೋಡಿಯಲ್ಲಿ ಪ್ರತಿಭಟನೆ ನಡೆಸಿದರು.ಶಾಸಕ ಉಮಾನಾಥ ಕೋಟ್ಯಾನ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಗಣಿಗಾರಿಕೆ ನಡೆಸುವ ಮಂದಿ ನನಗೆ ದುಡ್ಡು ಕೊಟ್ಟಿದ್ದಾರೆ ಎಂದು ಎಲುಬಿಲ್ಲದ ನಾಲಿಗೆಯಿಂದ ಕೆಲವರು ಹೇಳುತ್ತಿದ್ದಾರೆ.
ಕಾನೂನು ಬಾಹಿರ ಯೋಜನೆಗೆ ನಮ್ಮ ಬೆಂಬಲ ಇಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಹೋರಾಟದಲ್ಲಿ ನಾವೂ ಭಾಗಿಗಳಾಗುತ್ತೇವೆ ಎಂದರು.
ಸೀ ಫುಡ್ ಪಾರ್ಕ್ ನಿರ್ಮಿಸಲು ಯೋಚನೆ ಮಾಡಿದಾಗ ನನಗೆ ಅಂದು ವಿರೋಧ ಮಾಡಿದ ಜನರು ಇಂದು ಮೈನ್ಸ್ ಕಂಪೆನಿಗೆ ಜಾಗ ಮಾರಿದ್ದಾರೆ. ಊರಿನವರು ಒಗ್ಗಟ್ಟಾದರೆ ಮಾತ್ರ ಇದನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದರು.
ದ.ಕ. ಜಿ.ಪಂ.ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿ, ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯಿಂದ ಹೊರಡುವ 12-20 ಗಾಲಿಗಳ ಘನ ವಾಹನಗಳು ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ರಸ್ತೆ ಮೂಲಕ ತೆರಳಿ, ಬಳಿಕ ಮೂಡುಬಿದಿರೆ ಪುರಸಭೆಯಾಗಿ ಆಂಧ್ರಪ್ರದೇಶದತ್ತ ಹಾದುಹೋಗುವುದರಿಂದ ಇಡೀ ಪರಿಸರದಲ್ಲಿ ಅನಾರೋಗ್ಯಕರ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲು, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಸುಂದರ ಪೂಜಾರಿ ನಿಡ್ಡೋಡಿ, ಸತೀಶ್ ಅಮೀನ್, ದಿವೇಶ್, ಶಾಂತಿ ಪ್ರಸಾದ್ ಹೆಗ್ಡೆ, ಕರುಣಾಕರ, ಭಾಸ್ಕರ ದೇವಸ್ಯ ಮೊದಲಾದವರಿದ್ದರು.