
Udupi: ಆಂಬ್ಯುಲೆನ್ಸ್ ಸೇವೆ ಕಲ್ಪಿಸಲು ಮನವಿ
Wednesday, July 23, 2025
ಲೋಕಬಂಧು ನ್ಯೂಸ್, ಉಡುಪಿ
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಸೇವೆ ಮತ್ತು 108 ಸೇವೆ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆಂಬ್ಯುಲೆನ್ಸ್ ಸೇವೆ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಮನವಿ ಸಲ್ಲಿಸಿದರು.
ಪ್ರಸ್ತುತ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು 108 ಆಂಬ್ಯುಲೆನ್ಸ್ ಮತ್ತು ಇನ್ನೊಂದು ಆಸ್ಪತ್ರೆಯ ಆಂಬ್ಯುಲೆನ್ಸ್ ಸೇರಿದಂತೆ ಎರಡು ಆಂಬ್ಯುಲೆನ್ಸ್ ಗಳಿವೆ. ಆದರೆ, ಈ ಎರಡೂ
ಆಂಬ್ಯುಲೆನ್ಸ್ ಗಳಿಗೆ ಚಾಲಕರ ಕೊರತೆ ಇದೆ.
ಆಸ್ಪತ್ರೆಯ ಆಂಬ್ಯುಲೆನ್ಸ್ ವಾರದಲ್ಲಿ ಮೂರು ದಿನ ಮಾತ್ರ ಕೆಲಸದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, 108 ಆಂಬ್ಯುಲೆನ್ಸ್ ಚಾಲಕರಿಲ್ಲದೆ ನಿಷ್ಕ್ರಿಯಗೊಂಡಿದ್ದು, ಕಾರ್ಕಳಕ್ಕೆ ವರ್ಗಾಯಿಸಲಾಗಿದೆ.
ಆ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅದನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಶಿರ್ವದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಕಾರಣ 108 ಆಂಬ್ಯುಲೆನ್ಸ್ ಲಭ್ಯತೆ ಅತ್ಯಗತ್ಯವಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿಲ್ಲದ ಕಾರಣ ರೋಗಿಗಳು ಹೆಚ್ಚಿನ ವೆಚ್ಚದಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳನ್ನು ಬಳಸುವಂತಾಗಿದೆ ಎಂದು ಪವನ್ ಕುಮಾರ್ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು ಮತ್ತು ಶಿರ್ವಕ್ಕೆ 108 ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಪವನ್ ತಿಳಿಸಿದ್ದಾರೆ.