
Udupi: ಜು.27: ಉಡುಪಿಯಲ್ಲಿ 'ನಿರಂಜನರ ನೂರರ ನೆನಪು'
Friday, July 25, 2025
ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು ಉಡುಪಿ ಸಂಯುಕ್ತಾಶ್ರಯದಲ್ಲಿ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಕಲ್ಕುಂದ ಶಿವರಾಯ (ನಿರಂಜನ) ಜನ್ಮ ಶತಮಾನೋತ್ಸವ ಅಂಗವಾಗಿ ನಿರಂಜನರ ನೂರರ ನೆನಪು ವಿಚಾರಗೋಷ್ಟಿ ಜು. 27ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಹಿರಿಯ ಸಾಹಿತಿ ಎಸ್. ಜಿ. ಸಿದ್ಧರಾಮಯ್ಯ ವಿಚಾರಗೋಷ್ಟಿ ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸುವರು. ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಆಶಯ ಭಾಷಣ ಮಾಡುವರು.
ಬಳಿಕ 11.45ರಿಂದ ನಡೆಯುವ 'ಪ್ರಗತಿಶೀಲ ಸಾಹಿತ್ಯದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳು' ಗೋಷ್ಠಿಯಲ್ಲಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಕೇಶವ ಶರ್ಮ ವಿಚಾರ ಮಂಡನೆ ಮಾಡುವರು. ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ನವೀನ್ ಕುಮಾರ್ ಹಾಸನ ಪತಿಸ್ಪಂದನೆ ನೀಡುವರು.
ಮಧ್ಯಾಹ್ನ 2ರಿಂದ 'ನಿರಂಜನರ ಕಿರಿಯರ ವಿಶ್ವಕೋಶ ಮತ್ತು ವಿಶ್ವ ಕಥಾಕೋಶದ ಕಾಯಕ' ಗೋಷ್ಠಿಯಲ್ಲಿ ಪುತ್ತೂರು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅವರಿಂದ ವಿಚಾರ ಮಂಡನೆ, ಅಪರಾಹ್ನ 3ರಿಂದ ನಿರಂಜನರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ನಿರ್ವಹಣೆ ಚಿಂತಕ ಪ್ರೊ.ಕೆ. ಫಣಿರಾಜ್ ಅವರಿಂದ ನಡೆಯಲಿದೆ.
ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ ಶಿಖರೋಪನ್ಯಾಸ ನೀಡಲಿದ್ದು, ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮ ಸಂಚಾಲಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಮತ್ತು ರಥಬೀದಿ ಗೆಳೆಯರು ಉಡುಪಿ ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ಪ್ರಕಟಣೆ ತಿಳಿಸಿದೆ.