Udupi: `ಯಕ್ಷ ಗುರು' ಸಂಜೀವ ಸುವರ್ಣರಿಗೆ ಗೌರವಾರ್ಪಣೆ
Friday, July 25, 2025
ಲೋಕಬಂಧು ನ್ಯೂಸ್, ಉಡುಪಿ
ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಯಕ್ಷ ಗುರು, ಉಡುಪಿಯ 'ಯಕ್ಷ ಸಂಜೀವ ಯಕ್ಷಗಾನ ಕೇಂದ್ರ'ದ ಮುಖ್ಯಸ್ಥ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು.ಸಂಜೀವ ಸುವರ್ಣ ಅವರು ಯಕ್ಷಗಾನದ ಹಲವಾರು ಪ್ರಕಾರಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದು ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿ ನೀಡಿದ್ದಾರೆ.
ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವೀ ಪ್ರದರ್ಶನ ನೀಡಿದ್ದಾರೆ. ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಜೀವ ಸುವರ್ಣ, ಯಕ್ಷಗಾನದ ಗುರು-ಶಿಷ್ಯ ಪರಂಪರೆಯನ್ನು ಎತ್ತಿಹಿಡಿಯುತ್ತಲೇ ಯಕ್ಷಗಾನದ ಆಧುನಿಕ ರೂಪಾಂತರಗಳಿಗೆ ಹೆಸರುವಾಸಿಯಾಗಿದ್ದಾರೆ.
ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗೂ ಯಕ್ಷಗಾನ ಕಲಿಸಿರುವುದು ಅವರ ಯಕ್ಷ ಕಲಾ ನೈಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶ್ರೀವತ್ಸ ಬಣ್ಣಿಸಿದರು.
ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರಜ್ವಲ್ ಪೂಜಾರಿ, ಸಂದರ್ಶ ಆಚಾರ್ಯ ಮತ್ತು ಪ್ರಣವ್ ಕಾಮತ್, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಮಣಿಪಾಲ, ಕಾರ್ಯದರ್ಶಿಗಳಾದ ದೀಕ್ಷಿತ್ ಶೆಟ್ಟಿ, ನಿಖಿಲ್ ಮಡಿವಾಳ, ಹರ್ಷ ಆಚಾರ್ಯ ಮತ್ತು ಭೂಷಣ್ ಕುಮಾರ್ ಇದ್ದರು.