
ವೇದಾಂತ ವಾಚಸ್ಪತಿ ಅಗ್ರಹಾರ ನಾರಾಯಣ ತಂತ್ರಿ
Saturday, July 26, 2025
ವೇದಾಂತ ವಾಚಸ್ಪತಿ ಅಗ್ರಹಾರ ನಾರಾಯಣ ತಂತ್ರಿ
ಮಾಧ್ವ ವಾಙ್ಮಯ ಪ್ರಪಂಚದಲ್ಲಿ ವೇದಾಂತ ವಾಚಸ್ಪತಿ ಅಗ್ರಹಾರ ನಾರಾಯಣ ತಂತ್ರಿ ಧ್ರುವತಾರೆ. ವೇದ, ವೇದಾಂತಕ್ಕೆ ಅವರು ನೀಡಿದ ಕೊಡುಗೆ ಅನುಪಮ. ಅವರ ಸುವರ್ಣ ಸಂಸ್ಮರಣ ಸಂದರ್ಭದಲ್ಲಿ ತಂತ್ರಿಗಳನ್ನು ಸ್ಥೂಲ ಪರಿಚಯವನ್ನು ಶ್ರೀ ಜಲಂಚಾರು ರಘುಪತಿ ತಂತ್ರಿ ಜಿಜ್ಞಾಸುಗಳಿಗೆ ಉಣಬಡಿಸಿದ್ದಾರೆ.
ಸದಾ ಭಗವದ್ ಚಿಂತನೆ, ಸದಾಚಾರ, ವ್ರತ ನಿಯಮ, ಪಾಠ ಪ್ರವಚನ, ಸಂಸ್ಕೃತ ಗ್ರಂಥ ಅಧ್ಯಯನ, ರಚನೆ, ಅನುವಾದ ಮುಂತಾದ ಭಗವದ್ ಪ್ರೀತಿಗೆ ಪಾತ್ರವಾದ ಕೈಂಕರ್ಯಗಳನ್ನು ಮಾಡುತ್ತಾ ಸಾರ್ಥಕವಾಗಿ ಬದುಕಿದವರು ವೇದಾಂತ ಸುಧಾರಕ, ವೇದಾಂತ ಭೂಷಣ, ವೇದಾಂತ ರತ್ನ ಮುಂತಾದ ಅನ್ವರ್ಥ ಬಿರುದುಗಳನ್ನು ಪಡೆದ ಉಡುಪಿಯ ಕೀರ್ತಿಶೇಷ ಅಗ್ರಹಾರ ನಾರಾಯಣ ತಂತ್ರಿ.
ಎಲ್ಲವೂ ನಾರಾಯಣಾಯೇತಿ ಸಮರ್ಪಯಾಮಿ ಎಂದು ಮಧ್ವಪತಿಯಾದ ಉಡುಪಿ ಶ್ರೀಕೃಷ್ಣ ಮತ್ತು ಆಚಾರ್ಯ ಮಧ್ವರಿಗೆ ಸಮರ್ಪಿಸಿಸಿದವರು. ಮಾಧ್ವ ವಾಙ್ಮಯ ಪ್ರಪಂಚಕ್ಕೆ ಅವರ ಕೊಡುಗೆ ಅಸಾಧಾರಣವಾದುದು. ಒಂದು ಸಂಸ್ಥೆ ಮಾಡಲು ಅಸಾಧ್ಯವಾದ ಕಾರ್ಯವನ್ನು ನಾರಾಯಣ ತಂತ್ರಿ ತನ್ನ ಜೀವಿತಾವಧಿಯಲ್ಲಿ ಮಾಡಿಹೋಗಿದ್ದಾರೆ.
ಹುಟ್ಟಿದ್ದು ಕ್ರಿ.ಶ 1897ರಲ್ಲಿ. ಉಡುಪಿ ಸಮೀಪದ ಏಣಗುಡ್ಡೆ ಚೊಕ್ಕಾಡಿ ಗ್ರಾಮದ ಅಗ್ರಹಾರದಲ್ಲಿ. ತಂದೆ ಘನ ವಿದ್ವಾಂಸ ಗುರುರಾಜ ತಂತ್ರಿ, ತಾಯಿ ಸತ್ಯಭಾಮೆ. ಉಡುಪಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ತಂದೆಯೇ ಮಗನಿಗೆ ಮೊದಲ ಗುರು.
ಕಾವ್ಯ, ವ್ಯಾಕರಣ, ನ್ಯಾಯದ ಅಧ್ಯಯನ. ಮುಂದೆ ದ್ವೈತ ವೇದಾಂತ, ನ್ಯಾಯಶಾಸ್ತ್ರವನ್ನು ಆ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದ ಪಡಮುನ್ನೂರು ನಾರಾಯಣ ಆಚಾರ್ಯ, ಕರಂಬಳ್ಳಿ ಪದ್ಮನಾಭ ಆಚಾರ್ಯ, ಉಡುಪಿ ರಾಮಕೃಷ್ಣ ಆಚಾರ್ಯರಿಂದ ಕಲಿತರು. ದ್ವೈತ ವೇದಾಂತದಲ್ಲಿ ವಿದ್ವತ್, ಮದ್ರಾಸ್ ವಿ.ವಿ.ಯಿಂದ ಶಿರೋಮಣಿ ಮುಂತಾದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಮೈಸೂರು ಮಹಾರಾಜರಿಂದ ಸನ್ಮಾನಿತರಾದರು.
ಬಳಿಕ 35 ವರ್ಷ ಕಾಲ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ವಾಂಸರನ್ನು ಸೃಷ್ಟಿಸಿದ್ದಾರೆ. ಅಷ್ಟಮಠದ ಯತಿಗಳಿಗೂ ಪಾಠ ಹೇಳಿದ್ದ ತಂತ್ರಿಗಳು, ನಿವೃತ್ತಿ ನಂತರ ಉಡುಪಿ ಆಯುರ್ವೇದ ಕಾಲೇಜಿನಲ್ಲಿ ಮೂರು ವರ್ಷ ಸಂಸ್ಕೃತ ಪ್ರಾಧ್ಯಾಪಕರಾಗಿ ತನ್ನ ಪಾಂಡಿತ್ಯವನ್ನು ಧಾರೆ ಎರೆದರು.
ಸೇವಾವೃತ್ತಿಯಿಂದ ನಿವೃತ್ತರಾದರೂ ಗ್ರಂಥ ರಚನೆ, ಅನುವಾದದಲ್ಲಿ ಪ್ರವೃತ್ತರಾದ ಅಗ್ರಹಾರ ನಾರಾಯಣ ತಂತ್ರಿ, ಆಚಾರ್ಯ ಮಧ್ವರ ಸಂಸ್ಕೃತದ ಕ್ಷಿಷ್ಟ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಮಾಧ್ವ ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ.
ಆಚಾರ್ಯರ ಸರ್ವಮೂಲ ಗ್ರಂಥವನ್ನು ಮೊದಲ ಬಾರಿಗೆ ಕನ್ನಡದಲ್ಲಿ ಅನುವಾದ, ಅರ್ಥ ಪ್ರತಿಪದಾರ್ಥ, ವ್ಯಾಖ್ಯಾನ ಸಹಿತ ಬರೆದು ಹಲವು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಶ್ರೀ ವಾದಿರಾಜ ಗುರು ಸಾರ್ವಭೌಮರ ತಾಳೆಗರಿಯಲ್ಲಿರುವ ತುಳು ಲಿಪಿಯ ಅನೇಕ ಕೃತಿಗಳನ್ನು ದೇವನಾಗರಿ ಲಿಪಿಯಲ್ಲಿ ಬರೆದು ಮುದ್ರಿಸಿದ್ದಾರೆ. ಮಧ್ವಸಿದ್ಧಾಂತಸಾರ, ನವರತ್ನಗಳು, ಉಡುಪಿ ಕ್ಷೇತ್ರ ಮಹಾತ್ಮೆ, ಶ್ರೀ ಪಾಜಕ ಕ್ಷೇತ್ರ ಮಹಾತ್ಮೆ, ತೀರ್ಥಪ್ರಬಂಧ ಅರ್ಥಾನುವಾದ, ಶ್ರೀವಾದಿರಾಜ ಋಜುತ್ವಮಂಡನ, ದ್ವೈತದರ್ಶನ, ಶ್ರೀ ವೆಂಕಟೇಶ ಮಹಾತ್ಮೆ ಮಂತಾದ ಕೃತಿಗಳನ್ನೂ ರಚಿಸಿದ್ದಾರೆ.
ತಂತ್ರಿಗಳು ಆ ಕಾಲಕ್ಕೆ ಪ್ರಪ್ರಥಮ ಎನ್ನುವಂತೆ ಕನ್ನಡಕ್ಕೆ ಅನುವಾದಿಸಿ ರಚಿಸಿ ಮುದ್ರಿಸಿದ ಶ್ರೀಮದಾನಂದತೀರ್ಥರ ಸರ್ವಮೂಲ ಗ್ರಂಥಗಳು ರಾಜ್ಯ, ದೇಶದ ಲಕ್ಷಾಂತರ ಮಾಧ್ವರ ಮನೆಗಳಲ್ಲಿ ಇಂದಿಗೂ ಪಾರಾಯಣ ಯೋಗ್ಯ ಗ್ರಂಥವಾಗಿ ಪೂಜೆಗೊಳ್ಳುತ್ತಿದೆ!
ಉತ್ತರಾದಿ ಮಠ, ಮಂತ್ರಾಲಯ ಮಠ, ಶೃಂಗೇರಿ ಮಠ, ಚಿತ್ರಾಪುರ ಮಠದಿಂದ ಗೌರವ ಪ್ರಶಸ್ತಿಗಳು ತಂತ್ರಿಗಳನ್ನು ಅಲಂಕರಿಸಿವೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ವಾರ್ಷಿಕ ಗೌರವಧನ ಪುರಸ್ಕಾರ ಪಡೆದವರಲ್ಲಿ ಜಿಲ್ಲೆಗೆ ಮೊದಲಿಗರು ನಾರಾಯಣ ತಂತ್ರಿ.
ತಂತ್ರಿಗಳು ಅಗಲಿ (1974) 50 ವರ್ಷಗಳು ಉರುಳಿವೆ. ತನ್ನಿಮಿತ್ತ ಇದೇ ಜುಲೈ 26ರಂದು ಹ್ನ 3 ಗಂಟೆಗೆ ಅಗ್ರಹಾರ ನಾರಾಯಣ ತಂತ್ರಿಗಳ ಸುವರ್ಣ ಸಂಸ್ಮರಣೆಯನ್ನು ಉಡುಪಿ ಶ್ರೀಕೃಷ್ಣ ಸಭಾಭವನದಲ್ಲಿ ಅಗ್ರಹಾರ ನಾರಾಯಣ ತಂತ್ರಿ ಟ್ರಸ್ಟ್ ಏರ್ಪಡಿಸಿದೆ.
-ಜಲಂಚಾರು ರಘುಪತಿ ತಂತ್ರಿ, ಉಡುಪಿ