
ಯಕ್ಷಗಾನ ಅಭಿಜಾತ ಕಲೆ
Friday, July 4, 2025
ಲೋಕಬಂಧು ನ್ಯೂಸ್, ಉಡುಪಿ
ಯಕ್ಷಗಾನದಲ್ಲಿ ನನ್ನದು ಉತ್ಸವ ಪ್ರಚಾರಿ ಪಾತ್ರ. ನಾನು ಬಯಲು ಸೀಮೆಯವನಾದರೂ ನನಗೆ ಯಕ್ಷಗಾನದಲ್ಲಿ ನಾಲ್ಕು ಪ್ರಶಸ್ತಿ ಬಂದಿದೆ. ಯಕ್ಷಗಾನ ಅಭಿಜಾತ ಕಲೆ. ಯಕ್ಷಗಾನದ ಜೊತೆಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಭಾರಿ ಗೌರವ ಸಿಕ್ಕಿದೆ. ಇಲ್ಲಿನ ಯಕ್ಷಗಾನದ ಜೊತೆ ಸುಮಾರು 37 ವರ್ಷಗಳಿಗೂ ಹಳೆಯ ನಂಟು ಇದೆ ಎಂದು ಶತಾವಧಾನಿ ಡಾ.ಆರ್. ಗಣೇಶ್ ಹೇಳಿದರು.
ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ನಡೆದ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ನೀಡಲಾದ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಯಾವುದೇ ಒಂದು ಕಲೆಗೆ ಅದು ಬದುಕಿದ್ದಾಗಲೇ ಬೆಲೆ. ಆಂಧ್ರಪ್ರದೇಶ, ಕೇರಳ, ಯುರೋಪ್ ಸೇರಿ ಹಲವೆಡೆ ಯಕ್ಷಗಾನ ವ್ಯಾಪಕವಾಗಿ ಹಬ್ಬಿದೆ. ನಮ್ಮ ದೇಶದ ಕಲೆ, ಸಾಧನೆ ಮೌಲ್ಯದ ಬಗ್ಗೆ ಗೌರವ ಮೂಡದೇ ಇದ್ದರೆ ದೇಶದ ಬಗ್ಗೆ ಪ್ರೀತಿ ಬರುವುದಿಲ್ಲ. ಹಾಗಾಗಿ ದೇಶದ ಬಗ್ಗೆ ಪ್ರೀತಿ ಮೂಡಬೇಕಾದರೆ ಇತಿಹಾಸ ಹಾಗೂ ಮೌಲ್ಯಗಳನ್ನು ತಿಳಿಯಬೇಕು ಎಂದರು.
ಯಕ್ಷಗಾನದ ಸಾಹಿತ್ಯ ಅವರೋಹಣದಲ್ಲಿದೆ. ಸಾಮವೇದದಲ್ಲೂ ಅದೇ ಬಳಕೆಯಿದೆ. ಹಾಗಾಗಿ ಈ ಕಲೆ ಎಷ್ಟು ಪ್ರಾಚೀನ ಎಂಬುದು ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.
ಯಕ್ಷಗಾನದ ಗಾನ, ವಾದ್ಯಗಾರಿಕೆ, ಏರು ಮದ್ದಳೆ, ವೇಷಗಾರಿಕೆ, ನರ್ತನ ಸೇರಿ ಹಲವು ವಿಷಯಗಳ ಬಗ್ಗೆ ಬೇಕಾದಷ್ಟು ಕಲಿಯಬೇಕಿದೆ. ಪರಂಪರೆ ಮತ್ತು ಆಧುನಿಕತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಅದೇ ನಮ್ಮ ಮುಂದಿರುವ ಸವಾಲು ಎಂದರು.
ಪ್ರಸ್ತುತ ಇರುವ ಪರಂಪರೆಯನ್ನು ಸಂಕ್ಷಿಪ್ತವಾಗಿ ಉಳಿಸಿಕೊಳ್ಳಲು ಇರುವ ದಾರಿ ಕಲೆ ಮಾತ್ರ ಎಂದರು.
ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಗಿರಿಜಾ ಶಿವರಾಮ ಶೆಟ್ಟಿ, ಪ್ರಸಂಗ ಕರ್ತ ಪವನ್ ಕಿರಣಕೆರೆ, ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್, ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಮತ್ತು ಎಸ್.ವಿ. ಭಟ್, ಕೋಶಾಧಿಕಾರಿ ಸದಾಶಿವ ರಾವ್ ಇದ್ದರು.
ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ವಂದಿಸಿದರು.