
Bengaluru: ಧರ್ಮಸ್ಥಳದ ವಿರುದ್ಧದ ವೀಡಿಯೊ ಡಿಲೀಟ್'ಗೆ ಸೂಚನೆ
Friday, August 29, 2025
ಲೋಕಬಂಧು ನ್ಯೂಸ್, ಬೆಂಗಳೂರು
ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪ, ಮಾನಹಾನಿ ಹೇಳಿಕೆಗಳನ್ನು ನೀಡುತ್ತಿದ್ದ ಬುರುಡೆ ಗ್ಯಾಂಗ್'ಗೆ ಕೋರ್ಟ್ ಚಾಟಿ ಬೀಸಿದೆ. ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದ್ದ ಆಧಾರ ರಹಿತ ವೀಡಿಯೊ ಮತ್ತು ಪೋಸ್ಟ್'ಗಳಿಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ತಕ್ಷಣ ಅವುಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ.
ಚಿನ್ನಯ್ಯನ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸರು ದಾಖಲಿಸಿದ್ದ ಕ್ರೈಂ ನಂಬರ್ 39/2025 ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನವಶ್ಯಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರನ್ನು ಅವಹೇಳನಕಾರಿಯಾಗಿ ನಿಂದಿಸುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ. ಹಾಗೂ ಇತರರ ವಿರುದ್ಧ ಡಿ.ಹರ್ಷೇಂದ್ರ ಕುಮಾರ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು.
ಆ ದಾವೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಪ್ರತಿಬಂಧಕ ಆಜ್ಞೆ ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಆದೇಶ ಮಾಡಿತ್ತು. ಅದನ್ನು ಪ್ರಶ್ನಿಸಿ ಥರ್ಡ್ ಐ ಚಾನೆಲ್'ನವರು ನೇರವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸ್ಪೆಷಲ್ ಲೀವ್ ಪೆಟೀಷನ್ ದಾಖಲಿಸಿತ್ತು. ಸರ್ವೋಚ್ಛ ನ್ಯಾಯಾಲಯ, ಹೈಕೋರ್ಟಿಗೆ ಅರ್ಜಿ ಸಲ್ಲಿಸುವಂತೆ ಮೌಖಿಕವಾಗಿ ತಿಳಿಸಿತ್ತು.
ನಂತರದ ದಿನಗಳಲ್ಲಿ ಕುಡ್ಲಾ ರಾಂಪೇಜ್ ಚಾನೆಲ್'ನ ಅಜಯ್ ಅಂಚನ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟಿನ ಏಕ ಸದಸ್ಯ ಪೀಠ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶ ವಜಾಗೊಳಿಸಿ, ಮರು ತನಿಖೆ ನಡೆಸಿ ಆದೇಶ ಹೊರಡಿಸುವಂತೆ ಸೂಚಿಸಿತ್ತು.
ಆ ಆದೇಶವನ್ನು ಪ್ರಶ್ನಿಸಿ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ, ಸರ್ವೋಚ್ಛ ನ್ಯಾಯಾಲಯ ಹೈಕೋರ್ಟಿನ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೆ ದಾವೆಯ ಜೊತೆ ಸಲ್ಲಿಸಲಾದ ವೀಡಿಯೊಗಳು, ದಾಖಲೆಗಳು ಹಾಗೂ ಪ್ರಕರಣವನ್ನು ಪರಿಗಣಿಸಿ ಎರಡು ವಾರಗಳಲ್ಲಿ ತೀರ್ಪು ನೀಡುವಂತೆ ಆದೇಶಿಸಿತ್ತು.
ಮುಂದಿನ ದಿನಗಳಲ್ಲಿ ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ದಾಖಲೆಗಳು, ವೀಡಿಯೊಗಳು ಹಾಗೂ ಅವರ ಅರ್ಜಿಯನ್ನು ಪರಿಗಣಿಸಿ, ಐದು ದಿನಗಳ ಕಾಲ ವಾದ ವಿವಾದ ಆಲಿಸಿ, ವೀಡಿಯೊಗಳನ್ನು ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್'ಬುಕ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದ ಮೆಸೇಜ್'ಗಳು, ವೀಡಿಯೊಗಳು ಮತ್ತು ರೀಲ್'ಗಳನ್ನು ನ್ಯಾಯಾಲಯದಲ್ಲಿ ವೀಕ್ಷಿಸಿ, ಎರಡೂ ಕಡೆಯ ವಾದ ವಿವಾದಗಳನ್ನು ಸಂಪೂರ್ಣವಾಗಿ ಆಲಿಸಿ ಮತ್ತೆ ನ್ಯಾಯಾಲಯ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್ ಮತ್ತು ಜಯಂತ್ ಟಿ. ಮತ್ತಿತರರ ವಿರುದ್ಧ ಪ್ರತಿಬಂಧಕಾಜ್ಞೆ ನೀಡಿದೆ. ಮಾತ್ರವಲ್ಲದೆ, ಅವಹೇಳನಕಾರಿಯಾಗಿ ನಿಂದನಾತ್ಮಕವಾಗಿ ಮಾತನಾಡಿದ್ದ ವೀಡಿಯೊಗಳನ್ನು ತಕ್ಷಣ ಡಿಲೀಟ್ ಮಾಡುವಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಪ್ರತಿವಾದಿಗಳು ಮಾತ್ರವಲ್ಲದೆ ಇತರರಿಗೂ ಈ ಆದೇಶ ಒಂದು ಸಂದೇಶ ಕೊಟ್ಟಿದ್ದು ಯಾವುದೇ ರೀತಿಯ ಸಕಾರಣಗಳಿಲ್ಲದೆ, ದಾಖಲೆಗಳಿಲ್ಲದೆ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಹಾಗೂ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವವರಿಗೆ ಆದೇಶದ ಮೂಲಕ ಖಡಕ್ ಎಚ್ಚರಿಕೆ ನೀಡಿದೆ.
ಡಿ.ಹರ್ಷೇಂದ್ರ ಕುಮಾರ್ ಪರ ಹೈಕೋರ್ಟ್ ವಕೀಲ ಎಸ್. ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.