
Bengaluru: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ
Saturday, August 2, 2025
ಲೋಕಬಂಧು ನ್ಯೂಸ್, ಬೆಂಗಳೂರು
ಕೆ.ಆರ್.ನಗರದಲ್ಲಿ ಮನೆಗೆಲಸದಾಕೆಗೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.
ಅಲ್ಲದೆ, ಪ್ರಜ್ವಲ್‌ಗೆ 11 ಲಕ್ಷ ರೂ. ದಂಡವನ್ನೂ ವಿಧಿಸಿ ಐತಿಹಾಸಿ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಕೇವಲ 7 ತಿಂಗಳಲ್ಲಿ ಪೂರ್ಣಗೊಳಿಸಿ ನ್ಯಾ.ಗಜಾನನ ಭಟ್ ತೀರ್ಪು ನೀಡಿದ್ದಾರೆ. ಆ ಮೂಲಕ ಪ್ರಜ್ವಲ್ ಜೀವನ ಪೂರ್ತಿ ಜೈಲಿನಲ್ಲೇ ಇರುವಂತಾಗಿದೆ.
ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣನಿಗೆ ಅತ್ಯಾಚಾರ ಪ್ರಕರಣದಲ್ಲಿ ನ್ಯಾ.ಗಜಾನನ ಭಟ್ ನೀಡಿದ ಈ ತೀರ್ಪು ದೇಶಕ್ಕೆ ಮಾದರಿಯಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿ ತಪ್ಪು ಮಾಡಿದರೆ ಯಾವ ರೀತಿಯ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ದೊಡ್ಡ ಸಂದೇಶವನ್ನು ಈ ತೀರ್ಪು ಸಮಾಜಕ್ಕೆ ನೀಡಿದೆ.