.jpg)
Udupi: ಶಿಕ್ಷಕನಿಗಿದೆ ದೇಶದ ಭವಿಷ್ಯ ರೂಪಿಸುವ ಶಕ್ತಿ
Saturday, August 2, 2025
ಲೋಕಬಂಧು ನ್ಯೂಸ್, ಉಡುಪಿ
ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ದೇಶ ಮತ್ತು ಸಮಾಜದ ಭವಿಷ್ಯತ್ತನ್ನು ರೂಪಿಸುವ ಶಕ್ತಿ ಶಿಕ್ಷಕನಿಗಿದೆ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಅರಿತು ಬೋಧಿಸುವಾತ ಆದರ್ಶ ಶಿಕ್ಷಕ ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅಶೋಕ್ ಎಸ್. ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಹೆಗ್ಗುಂಜೆ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ 200 ಶಾಲೆಗಳ 20 ಸಾವಿರ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಶಿಕ್ಷಕ ನಿರಂತರ ಅಧ್ಯಯನಶೀಲನಾಗಿರಬೇಕು. ಕರ್ತವ್ಯ ಪ್ರಜ್ಞೆಯಿಂದ ಶಿಕ್ಷಕ ವೃತ್ತಿ ನಿಭಾಯಿಸಿದಲ್ಲಿ ಅದು ದೇವಪ್ರೀತಿಗೆ ಕಾರಣವಾಗುತ್ತದೆ ಎಂದರು.
ಪ್ರಾಣಿ, ಪಕ್ಷಿಗಳಲ್ಲಿ ಪರಸ್ಪರ ಹಂಚಿ ತಿನ್ನುವ ಮನೋಭಾವ ಇದೆ. ಆದರೆ, ಅದು ಮನುಷ್ಯನಲ್ಲಿ ವಿರಳ. ಫಲಾಪೇಕ್ಷೆ ರಹಿತ ದಾನ ಭಾವ ಮೂಡಿದಾಗ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಹೆಗ್ಗುಂಜೆ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಡಾ.ಎಚ್.ಎಸ್. ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಮ್ಮ ಹಿರಿಯರು ತಮ್ಮೂರಿಗೆ ಶಿಕ್ಷಣ ಲಭಿಸಬೇಕೆಂಬ ಆಶಯದಿಂದ ಅನುದಾನಿತ ಶಾಲೆಗಳನ್ನು ಆರಂಭಿಸಿದ್ದಾರೆ. ಉಭಯ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ಅದೂ ಕಾರಣ.
ಆದರೆ, ಸರ್ಕಾರ ಅನುದಾನಿತ ಶಾಲೆಗಳ ಬಗ್ಗೆ ಮಲತಾಯಿ ಧೋರಣೆ ತಳೆದ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ವರ್ಷಕ್ಕೆ 2 ಸಾವಿರ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದಾಗಿ ಸರ್ಕಾರಿ ಶಾಲೆಗಳೂ ಮುಚ್ಚುತ್ತಿವೆ. ರಾಜ್ಯದಲಿರುವ 48 ಸಾವಿರ ಸರಕಾರಿ ಶಾಲೆಗಳ ಜೊತೆ ಸುಮಾರು 2,400ರಷ್ಟಿರುವ ಅನುದಾನಿತ ಶಾಲೆಗಳನ್ನೂ ಸರಕಾರವೇ ನಡೆಸಲಿ ಎನ್ನುವುದು ನಮ್ಮ ಬಹುಕಾಲದ ಬೇಡಿಕೆ ಎಂದರು.
ಮಕ್ಕಳಿಗೆ ಗುಣಮಟ್ಟದ ಉಚಿತ ಸಮವಸ್ತ್ರ ನೀಡುವ ಡಾ.ಎಚ್.ಎಸ್.ಶೆಟ್ಟಿ ರಾಜ್ಯಕ್ಕೆ ಮಾದರಿ ಎಂದು ಬಣ್ಣಿಸಿದರು.
ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಕಲಿಸುವ ಏಕೈಕ ಮಾಧ್ಯಮ
ಹೆಗ್ಗುಂಜೆ ರಾಜೀವ್ ಶೆಟ್ಟಿ ಟ್ರಸ್ಟ್ ಪ್ರವರ್ತಕ ಡಾ.ಎಚ್.ಎಸ್. ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿ, ಸುಮಾರು 17 ವರ್ಷದ ಹಿಂದೆ 500 ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಆರಂಭವಾದ ವಿದ್ಯಾರ್ಥಿ ಸಮವಸ್ತ್ರ ವಿತರಣೆಯ ಕಾರ್ಯ ಇಂದಿಗೂ ಮುಂದುವರಿದಿದೆ.
ಉತ್ತಮ ಕಾರ್ಯ ಮಾಡುವಾಗ ಸರಕಾರ ಸಹಕಾರ ನೀಡುತ್ತಿಲ್ಲ ಎನ್ನುವ ಬೇಸರವಿದೆ. ಉತ್ತಮ ಕಾರ್ಯಕ್ರಮಗಳಿಗೆ ಸರಕಾರ ಬೆನ್ನೆಲುಬಾಗಬೇಕು. ಆದರೆ, ಸರಕಾರದ ಅಸಡ್ಡೆ ಬೇಸರ ತರಿಸಿದೆ. ಹಾಗಾಗಿ ಈ ಬಾರಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತಿದೆ.
ಕುಗ್ರಾಮಗಳಲ್ಲಿರುವ ಅನುದಾನಿತ ಶಾಲೆಗಳು ಮಾತ್ರ ಕನ್ನಡ ಕಲಿಸುವ ಏಕೈಕ ಮಾಧ್ಯಮ. ಅಂಥ ಶಾಲೆಗಳನ್ನು ಸರಕಾರ ಕೈಹಿಡಿದು ಮೇಲೆತ್ತಬೇಕಾದ ಅಗತ್ಯತೆ ಇದೆ ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್ ಶೆಟ್ಟಿ, ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕಿ ಶ್ರೀಮತಿ ಇಂದಿರಾ ಹಾಲಂಬಿ ಅವರಿಗೆ ಒಂದು ಲಕ್ಷ ರೂ. ನಗದನ್ನೊಳಗೊಂಡ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾಲಾಡಿ ರಾಜೀವ ಶೆಟ್ಟಿ ಸರಕಾರಿ ಶಾಲೆಯ ವಿದ್ಯಾರ್ಥಿ ಶ್ರೀರಾಮ್ ಸಾಧನೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ.ಎಚ್.ಎಸ್. ಶೆಟ್ಟಿ ಅವರನ್ನು ಯಕ್ಷಗಾನ ಕಲಾರಂಗ ಹಾಗೂ ಕೊಡಗು ವಿ.ವಿ. ವತಿಯಿಂದ ಗೌರವಿಸಲಾಯಿತು.
ವಾಗ್ಮಿ ಬಾರ್ಕೂರು ದಾಮೋದರ ಶರ್ಮ ನಿರೂಪಿಸಿ, ವಂದಿಸಿದರು.