New Delhi: ದೇಶಾದ್ಯಂತ ಸಂಭ್ರಮದ ಗಣೇಶೋತ್ಸವ: ಗಣ್ಯರ ಶುಭಾಶಯ
Wednesday, August 27, 2025
ಲೋಕಬಂಧು ನ್ಯೂಸ್, ನವದೆಹಲಿ
ದೇಶಾದ್ಯಂತ ಬುಧವಾರ ಸಂಭ್ರಮ ಸಡಗರದಿಂದ ಗಣೇಶ ಹಬ್ಬವನ್ನು ಆಚರಿಸಲಾಗಿದ್ದು, ಗಣೇಶೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಶುಭಾಶಯ ಕೋರಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, 'ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು.
ಈ ಹಬ್ಬವನ್ನು ಗಣೇಶನ ಜನ್ಮದಿನ ಅಂಗವಾಗಿ ಬಹಳ ಸಂತೋಷದಿಂದ ಆಚರಿಸಲಾಗುತ್ತದೆ. ಅಡೆತಡೆಗಳನ್ನು ನಾಶ ಮಾಡುವ ಗಣೇಶ ರಾಷ್ಟ್ರ ನಿರ್ಮಾಣದ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವುದನ್ನು ಮುಂದುವರಿಸಲಿ. ತನ್ನ ಆಶೀರ್ವಾದದೊಂದಿಗೆ ಎಲ್ಲಾ ದೇಶವಾಸಿಗಳು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಂಡು, ಬಲಿಷ್ಠ ಭಾರತ ನಿರ್ಮಿಸುವತ್ತ ಭಕ್ತಿಯಿಂದ ಕೆಲಸ ಮಾಡುವುದನ್ನು ಮುಂದುವರಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಪೋಸ್ಟ್ ಮಾಡಿ, 'ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಂಬಿಕೆ ಮತ್ತು ಭಕ್ತಿಯಿಂದ ತುಂಬಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ ಎಂದು ಆಶಿಸುತ್ತೇನೆ.
ಗಜಾನನ ತನ್ನ ಎಲ್ಲಾ ಭಕ್ತರಿಗೆ ಸಂತೋಷ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಗಣಪತಿ ಬಪ್ಪಾ ಮೋರೆಯಾ' ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಮಾಡಿ, 'ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಬಡವ ಬಲ್ಲಿದರೆನ್ನದೆ, ಜಾತಿ ಮತಗಳ ಭೇದವಿಲ್ಲದ ಸರ್ವರೂ ಜೊತೆಗೂಡಿ ಆಚರಿಸುವ ಈ ಹಬ್ಬ ನಾಡಿನಲ್ಲಿ ಸ್ನೇಹ ಸೌಹಾರ್ದತೆ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.