Court ಛೀಮಾರಿ: ಸಾರಿಗೆ ಮುಷ್ಕರ ಸ್ಥಗಿತ
Tuesday, August 5, 2025
ಲೋಕಬಂಧು ನ್ಯೂಸ್, ಬೆಂಗಳೂರು
ತಕ್ಷಣ ಸಾರಿಗೆ ಮುಷ್ಕರ ನಿಲ್ಲಿಸಿ ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಗುಡುಗಿದ ಹೈಕೋರ್ಟ್ ಎಚ್ಚರಿಕೆಗೆ ಬೆದರಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸಾರಿಗೆ ಮುಷ್ಕರ ನಿಲ್ಲಿಸುವುದಾಗಿ ತಿಳಿಸಿದೆ.ಹೈಕೋರ್ಟ್‌ನಲ್ಲಿ ಸಾರಿಗೆ ಮುಷ್ಕರ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ. ಜೋಷಿ ಅವರಿದ್ದ ಪೀಠ, ಸಾರಿಗೆ ನೌಕರರ ಸಂಘಕ್ಕೆ ಛೀಮಾರಿ ಹಾಕಿದ್ದು, ಬುಧವಾರದಿಂದ ಎಂದಿನಂತೆ ಬಸ್ ಸಂಚಾರ ನಡೆಸುವಂತೆ ಸೂಚಿಸಿದೆ. ಎರಡು ದಿನಗಳ ಕಾಲ ಮಧ್ಯಂತರ ಆದೇಶ ವಿಸ್ತರಿಸಿ, ಆ. 7ಕ್ಕೆ ವಿಚಾರಣೆ ಮುಂದೂಡಿದೆ.
ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ಸಹಿಸಲಾಗದು. ಎಸ್ಮಾ ಜಾರಿಯಾಗಿದ್ದರೂ ಮುಷ್ಕರ ಮಾಡುತ್ತೀರಿ ಎಂದು ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಗರಂ ಆಗಿದ್ದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮುಷ್ಕರ ಕೈ ಬಿಡದಿದ್ದರೆ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡದೇ ಇದ್ದಲ್ಲಿ ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಹೈಕೋರ್ಟ್ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಗೆ ಹೇಳಿದೆ.
ಅದರಿಂದಾಗಿ ನಾಳೆ (ಆ.6) ಸಾರಿಗೆ ನೌಕರರು ಮುಷ್ಕರ ನಡೆಸುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.