-->
Dharmastala: ಧರ್ಮಸ್ಥಳ ಪ್ರಕರಣ: ಸರ್ಕಾರ ಕ್ಷಮೆ ಕೇಳಲಿ

Dharmastala: ಧರ್ಮಸ್ಥಳ ಪ್ರಕರಣ: ಸರ್ಕಾರ ಕ್ಷಮೆ ಕೇಳಲಿ

ಲೋಕಬಂಧು ನ್ಯೂಸ್, ಧರ್ಮಸ್ಥಳ
ಸತ್ಯ ಹೊರಗೆ ಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ರಾಜ್ಯ ಸರ್ಕಾರ ಜನತೆಯ ಕ್ಷಮೆ ಯಾಚಿಸಬೇಕು‌ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ತೀರ್ಥಹಳ್ಳಿಯಿಂದ ಸುಮಾರು 250 ಕಾರುಗಳಲ್ಲಿ ಭಕ್ತಾದಿಗಳೊಂದಿಗೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಶ್ರದ್ಧಾಭಕ್ತಿಯಿಂದ ಗೌರವ ಅರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಂಟು ಶತಮಾನಗಳಿಂದ ಸತ್ಯ, ಧರ್ಮ, ನ್ಯಾಯ, ನೀತಿ, ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಿಯರ ಶ್ರದ್ಧಾಕೇಂದ್ರ.


ದೂರುದಾರನಿಂದಾಗಿ ಪವಿತ್ರ ಕ್ಷೇತ್ರದ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಅಪಪ್ರಚಾರವಾಗುತ್ತಿದ್ದು, ದೇಶ ವಿದೇಶಗಳಲ್ಲಿರುವ ಧರ್ಮಸ್ಥಳದ ಲಕ್ಷಾಂತರ ಮಂದಿ ಭಕ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ಆತಂಕವಾಗಿದೆ. ಭಯ, ಆತಂಕ ಮತ್ತು ಗೊಂದಲದ ವಾತಾವರಣ ಮೂಡಿಬಂದಿದೆ.


ದೇವರ ಅನುಗ್ರಹದಿಂದ ಈಗ ಸತ್ಯ ಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯ ಸರ್ಕಾರ ಜನತೆಯ ಕ್ಷಮೆ ಯಾಚಿಸಬೇಕು ಎಂದರು.


ಹೆಗ್ಗಡೆ ಪ್ರಾರಂಭಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳಿಗೆ ಕಾಯಕಲ್ಪ, ಮದ್ಯವರ್ಜನ ಶಿಬಿರ, ಜ್ಞಾನದೀಪ, ಜ್ಞಾನಜ್ಯೋತಿ, ಮಹಿಳಾ ಸಬಲೀಕರಣ, ಸ್ವ-ಸಹಾಯ ಸಂಘಗಳು ಇತ್ಯಾದಿ ಹತ್ತು ಹಲವು ಜನಮಂಗಳ ಕಾರ್ಯಕ್ರಮಗಳಿಂದ ದೀನ ದಲಿತರು, ಹಿಂದುಳಿದ ವರ್ಗದವರ ಸರ್ವತೋಮುಖ ಪ್ರಗತಿಯಾಗಿದೆ. ಸರ್ಕಾರ ಮಾಡದ ಸೇವಾಕಾರ್ಯಗಳನ್ನು ಹೆಗ್ಗಡೆ ಮಾಡಿದ್ದಾರೆ ಎಂದು ಅಭಿನಂದಿಸಿದರು.


ದೂರುದಾರನ ಬುರುಡೆ ಪ್ರಕರಣದಿಂದ  ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾಗಿದೆ. ಇದರಲ್ಲಿ ವಿಚಾರವಂತರು ಹಾಗೂ ಎಡಪಂಥೀಯರ ಕೈವಾಡವಿದೆ. ಆರಂಭದಲ್ಲೇ ಆತನ ಬಾಯಿ ಬಿಡಿಸುತ್ತಿದ್ದರೆ ಸತ್ಯ ವಿಚಾರ ತಿಳಿಯುತ್ತಿತ್ತು.


ಸುಜಾತ ಭಟ್ ಪಾತ್ರವಂತೂ ಸಿನಿಮಾಕ್ಕಿಂತಲೂ ಅದ್ಭುತವಾಗಿದೆ. ಆಕರ ಸಿನಿಮಾ ತಯಾರಿಸುತ್ತಿದ್ದರೆ ಪ್ರಚಾರವೂ ಸಿಗುತ್ತಿತ್ತು. ಅಪಾರ ಹಣವನ್ನೂ ಸಂಪಾದಿಸಬಹುದಿತ್ತು ಎಂದವರು ವ್ಯಂಗ್ಯವಾಡಿದರು.


ಏನೇ ಆಗಲಿ, ಸತ್ಯ ಹೊರಬಂದಿದೆ. ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ನಗರ ನಕ್ಸಲರು ಹಾಗೂ ಎಡಪಂಥೀಯರ ನಿಗ್ರಹ ಆಗಬೇಕು ಎಂದು ಆರಗ ಸರ್ಕಾರವನ್ನು ಒತ್ತಾಯಿಸಿದರು.


ಹೆಗ್ಗಡೆ ಜೊತೆಗೆ ಲಕ್ಷಾಂತರ ಮಂದಿ ಭಕ್ತರು, ಅಭಿಮಾನಿಗಳ ಪೂರ್ಣ ಬೆಂಬಲ ಸದಾ ಇದೆ ಎಂದವರು ಭರವಸೆ ನೀಡಿದರು.


ಭಕ್ತರ ಶ್ರದ್ಧಾಭಕ್ತಿಯ ಅಭಿಮಾನಕ್ಕೆ ಸಂತಸಪಟ್ಟ ಹೆಗ್ಗಡೆಯವರು ಮುಂದೆಯೂ ಸದಾ ಇದೇ ರೀತಿಯ ಪ್ರೀತಿ ವಿಶ್ವಾಸ, ಗೌರವ ಇರಲೆಂದು ಆಶಿಸಿದರು.


ತೀರ್ಥಹಳ್ಳಿಯ ಪೂಜ್ಯಪಾದ ಚಿಕಿತ್ಸಾಲಯದ ಡಾ. ಜೀವಂಧರ ಕುಮಾರ್, ಬಿ.ಜೆ.ಪಿ. ನಾಯಕ ನವೀನ್ ಸೇರಿದಂತೆ ಭಕ್ತರು, ಅಭಿಮಾನಿಗಳು ದೇವರ ದರ್ಶನ ಮಾಡಿ, 'ಅನ್ನಪೂರ್ಣ'ದಲ್ಲಿ ಪ್ರಸಾದ ಸ್ವೀಕರಿಸಿ ಊರಿಗೆ ಮರಳಿದರು.

Ads on article

Advertise in articles 1

advertising articles 2

Advertise under the article