
GST ಮಾಹಿತಿ ಕಾರ್ಯಾಗಾರ
Monday, August 4, 2025
ಲೋಕಬಂಧು ನ್ಯೂಸ್, ಉಡುಪಿ
ಯಾವುದೇ ವ್ಯಾಪಾರ, ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಇಲಾಖೆಯ ಕಾರ್ಯವಾಗಿದ್ದು, ಸಮಸ್ಯೆ ಬಂದ ಬಳಿಕ ಪರಿಹಾರ ಹುಡುಕುವ ಬದಲು ಆರಂಭದಲ್ಲೇ ತಿಳುವಳಿಕೆ ಹೊಂದುವುದು ಉತ್ತಮ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೊಳೆಯಪ್ಪ ಎಚ್. ಹೇಳಿದರು.
ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆ ಹಾಗೂ ಲೆಕ್ಕಪರಿಶೋಧಕರ ಸಂಘ ವತಿಯಿಂದ ಸೋಮವಾರ ನಡೆದ ಜಿಎಸ್‌ಟಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಕೊಲಿನ್ ರಾಡ್ರಿಗಸ್ ಮಾತನಾಡಿ, ಕೊರೊನೋತ್ತರ ಕಾಲಘಟ್ಟದಲ್ಲಿ ಎಲ್ಲಾ ವ್ಯವಹಾರಗಳು ಆನ್‌ಲೈನ್ ಮೂಲಕ ನಡೆಯಲು ಪ್ರಾರಂಭವಾಗಿದ್ದು, ಆದಾಯ ತೆರಿಗೆ ಇಲಾಖೆ ಪಾರದರ್ಶಕತೆಗೆ ಆದ್ಯತೆ ನೀಡುತ್ತಿದೆ. ಹಾಗಾಗಿ ವ್ಯಾಪಾರಿಗಳಿಗೆ ಕಾನೂನು ಅರಿವು ಅತೀ ಅಗತ್ಯವಾಗಿದೆ.
ಹೂ, ಹಣ್ಣು, ಪ್ಯಾಕೆಟ್ ರಹಿತ ಹಾಲು ಸೇರಿದಂತೆ ಅನೇಕ ವಸ್ತುಗಳು ತೆರಿಗೆ ಮುಕ್ತ ವಲಯದಲ್ಲಿದ್ದು, ಆ ಬಗ್ಗೆ ವ್ಯಾಪಾರಿಗಳು ಸಂಬಂಧಪಟ್ಟ ಇಲಾಖೆ ಅಥವಾ ಲೆಕ್ಕಪರಿಶೋಧಕರ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆ ಅಧ್ಯಕ್ಷ ಆನಂದ ಕಾರ್ನಾಡ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಕಾರ್ಯದರ್ಶಿ ಓಸ್ವಾಲ್ಡ್ ಸಲ್ದಾನಾ, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷೆ ಅರ್ಚನಾ ಮಯ್ಯ, ಲೆಕ್ಕಪರಿಶೋಧಕರಾದ ಅಶ್ವಥ್ ಜೆ. ಶೆಟ್ಟಿ ಮತ್ತು ರಾಘವೇಂದ್ರ ಮೊಗವೀರ ಉಪಸ್ಥಿತರಿದ್ದರು.
ಎಂ. ಗಣೇಶ ಕಿಣಿ ಸ್ವಾಗತಿಸಿ, ಲಕ್ಷ್ಮೀಶ ರಾವ್ ನಿರೂಪಿಸಿದರು.