-->
Udupi: ಛತ್ತೀಸ್'ಘಡದಲ್ಲಿ ಧರ್ಮಭಗಿನಿಯರ ಸ್ವಾತಂತ್ರ್ಯಕ್ಕೆ  ಧಕ್ಕೆ

Udupi: ಛತ್ತೀಸ್'ಘಡದಲ್ಲಿ ಧರ್ಮಭಗಿನಿಯರ ಸ್ವಾತಂತ್ರ್ಯಕ್ಕೆ ಧಕ್ಕೆ

ಲೋಕಬಂಧು ನ್ಯೂಸ್, ಉಡುಪಿ
ಛತ್ತೀಸ್'ಘಡದ ಘಟನೆಯಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸವಾಗಿದ್ದು ಅದನ್ನು ಪ್ರತಿಯೊಬ್ಬ ಭಾರತೀಯನೂ ಖಂಡಿಸಬೇಕಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಚಿಂತಕ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಛತ್ತೀಸ್'ಘಡದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಬಂಧಿಸಿ ದೌರ್ಜನ್ಯ ನಡೆಸಿರುವ ಕ್ರಮವನ್ನು ಖಂಡಿಸಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ನೇತೃತ್ವದಲ್ಲಿ ಇತರ ಸಹಭಾಗಿ ಸಂಘಟನೆಗಳ ಸಹಕಾರದೊಂದಿಗೆ   ಸೋಮವಾರ ಸಂಜೆ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಂವಿಧಾನದ ಮೂಲ ತತ್ವಗಳಿಗೆ ಚ್ಯುತಿ ಬಾರದಂತೆ ರಕ್ಷಿಸಬೇಕಾದ ಅಗತ್ಯವಿದ್ದು, ಎಲ್ಲರೂ ಸಮಾನರು ಎಂಬ ತತ್ವದಡಿ ರಕ್ಷಣೆ ನೀಡಬೇಕಾಗಿದೆ.


ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕು ಇದೆ ಎಂದರು.


ದೇಶದ ಅಭಿವೃದ್ಧಿಯಲ್ಲಿ ಕ್ರೈಸ್ತರ ಕೊಡುಗೆಯೂ ಇದೆ. ಸ್ವಾತಂತ್ರ್ಯ ಪೂರ್ವದಿಂದಲೇ ಕೊಡುಗೆ ನೀಡಿಕೊಂಡು ಬಂದಿದ್ದಾರೆ.


ದೇಶದಾದ್ಯಂತ 30 ಸಾವಿರಕ್ಕೂ ಅಧಿಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿದ್ದು 50 ಲಕ್ಷ ಜನರು ಅವುಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆ ಪೈಕಿ 48 ಲಕ್ಷ ಮಂದಿ ಇತರ ಧರ್ಮೀಯರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.


ಸಮುದಾಯದ ಕೊಡುಗೆ ಗಮನೀಯ
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್ ಮಾತನಾಡಿ, ಛತ್ತೀಸ್'ಘಡದಲ್ಲಿ ಇಬ್ಬರು ಧರ್ಮಭಗಿನಿಯರು, ಸಂಕಷ್ಟದಲ್ಲಿದ್ದ ಈರ್ವರು ಮಹಿಳೆಯರ ನೋವಿಗೆ ಸ್ಪಂದಿಸಿರುವುದು ಬಲಪಂಥೀಯ ಸಂಘಟನೆಗಳಿಗೆ ಮಹಾಪಾಪ ಎಂಬಂತೆ ಕಂಡಿದೆ. ರೋಗಿಗಳ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಗಮನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೊನಾಲ್ಡ್ ಆಲ್ಮೆಡಾ, ಬಂಧಿತ ಧರ್ಮಭಗಿನಿಯರನ್ನು ಷರತ್ತುಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಆದರೆ, ಅವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ, ಧರ್ಮಭಗಿನಿಯರನ್ನು ಛತ್ತೀಸ್'ಘಡದ ದುರ್ಗ ರೈಲು ನಿಲ್ದಾಣದಲ್ಲಿ ಬಲಪಂಥೀಯ ಸಂಘಟನೆಗಳು ಅಮಾನವೀಯವಾಗಿ ನಡೆಸಿಕೊಂಡಿದ್ದು ಆ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.


ಇದೊಂದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಛತ್ತೀಸ್'ಘಡದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದರು.


ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀಫನ್ ಡಿ'ಸೋಜಾ, ಸಾರ್ವಜನಿಕ ಸಂಪರ್ಕಸಧಿಕಾರಿ ವಂ.ಡೆನಿಸ್ ಡೆಸಾ, ಧಾರ್ಮಿಕ ಗುರುಗಳಾದ ಎಪಿಸ್ಕೋಪಲ್ ವಿಕಾರ್ ವಂ.ಜಿಯೊ ತಾವ್ರೊ, ಸಹಬಾಳ್ವೆಯ ಪ್ರೊ. ಫಣಿರಾಜ್, ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ನಿತಿನ್ ಬಾರೆಟ್ಟೊ, ಕೆಥೊಲಿಕ್ ಸಭಾ ಕಾರ್ಯದರ್ಶಿ ಜೊಯೆಲ್, ಬ್ರಹ್ಮಾವರ ಸಿರಿಯನ್ ಒರ್ಥೊಡಕ್ಸ್ ಸಭೆಯ ವಿಕಾರ್ ಜನರಲ್ ವಂ.ಎಂ.ಸಿ ಮಥಾಯಿ, ಕರ್ನಾಟಕ ಸದರ್ನ್ ಡಯಾಸಿಸ್ ಉಡುಪಿ ಏರಿಯಾ ಚೇರ್ಮನ್ ಪಾಸ್ಟರ್ ಕಿಶೋರ್ ಮೊದಲಾದವರಿದ್ದರು.


ಪ್ರತಿಭಟನೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂಗ್ರಹಿಸಿದ ಸಹಿಗಳ ಮೂಲಕ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಛತ್ತೀಸ್'ಘಡ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.


ಸಭಾದ ನಿಯೋಜಿತ ಅಧ್ಯಕ್ಷ ಲೂಯಿಸ್ ಡಿ'ಸೋಜಾ ಮನವಿಪತ್ರ ವಾಚಿಸಿದರು. ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್ ವಂದಿಸಿದರು. ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೇಲಿಯೊ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article