.jpg)
Udupi:ಲೋಕಲ್ಯಾಣಕ್ಕಾಗಿ ಕೃಷ್ಣಾವತಾರ
Friday, August 1, 2025
ಲೋಕಬಂಧು ನ್ಯೂಸ್, ಉಡುಪಿ
ಶ್ರೀಕೃಷ್ಣನದು ಪೂರ್ಣಾವತಾರ. ಭಗವಂತನ ಮಿಕ್ಕೆಲ್ಲಾ ಅವತಾರಗಳು ನಿರ್ದಿಷ್ಟ ಕಾರಣಕ್ಕಾಗಿ ಆಗಿದ್ದರೆ, ಜಗತ್ತಿನ ಸಮಸ್ತರ ಕಲ್ಯಾಣಕ್ಕಾಗಿ ಭಗವಂತ ಕೃಷ್ಣನ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ನಡೆಯುತ್ರಿರುವ ಶ್ರೀಕೃಷ್ಣ ಮಂಡಲೋತ್ಸವ ಸಂದರ್ಭದಲ್ಲಿ ಶುಕ್ರವಾರ ರಾಜಾಂಗಣದಲ್ಲಿ ಸಾಂಸ್ಕೃತಿಕ ಮತ್ತು ಜ್ಞಾನ ಮಂಡಲೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮೂಲಕ ಸುಖೀ ಸಮಾಜ ನಿರ್ಮಾಣ ಮಾಡಿದ ಭಗವಂತನ ಉಪಕಾರ ಸ್ಮರಣೆಗಾಗಿ ಆತನ ಹುಟ್ಟುಹಬ್ಬವನ್ನು ವೈಭವಯುತವಾಗಿ ಎಷ್ಟು ದಿನಗಳ ಕಾಲವೂ ಆಚರಿಸಬಹುದು. ಈ ನಿಟ್ಟಿನಲ್ಲಿ ಉಡುಪಿ ಕೃಷ್ಣಮಠದಲ್ಲಿ ಮೊಟ್ಟಮೊದಲ ಬಾರಿಗೆ 48 ದಿನಗಳ ಪರ್ಯಂತ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಕೃಷ್ಣನ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ.
ಈ ಬಾರಿ ಚಾಂದ್ರಮಾನ ಮತ್ತು ಸೌರಮಾನ ಕೃಷ್ಣಾಷ್ಟಮಿ ಬಂದಿದ್ದು, ಎರಡೂ ದಿನಗಳಲ್ಲಿ ಕೃಷ್ಣ ಚಿಂತನೆ ನಡೆಸುವ ಸದವಕಾಶ ಲಭಿಸಿದೆ ಎಂದರು.
ರಾಮ- ಕೃಷ್ಣರ ಅವತಾರದಲ್ಲಿ ಸಾಮ್ಯತೆ
ಶ್ರೀರಾಮ ಮತ್ತು ಶ್ರೀಕೃಷ್ಣರ ಅವತಾರದಲ್ಲಿ ಸಾಮ್ಯತೆ ಇದೆ. ಇವೆರಡೂ ಅವತಾರಗಳು ಒಂದೇ ನಾಟಕದ ಎರಡು ಅಂಕಗಳು ಎಂದು ಆಚಾರ್ಯ ಮಧ್ವರು ಪ್ರತಿಪಾದಿಸಿದ್ದಾರೆ.
ರಾಮ- ಕೃಷ್ಣರ ನಡೆ, ನುಡಿಯ ಅನುಸರಣೆಯಿಂದ ಜೀವನೋತ್ಕರ್ಷವಾಗುತ್ತದೆ, ಜನ್ಮ ಸಾರ್ಥಕವಾಗುತ್ತದೆ. ಆದ್ದರಿಂದ ಆಧ್ಮಾತಿಕತೆಗಾಗಿ ವಿಶ್ವವೇ ಭಾರತದತ್ತ ನೋಡುತ್ತಿದೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ತುಳು ಶಿವಳ್ಳಿ ಮಾಧ್ವಮಹಾಮಂಡಲ (ತುಶಿಮಾಮ) ಅಧ್ಯಕ್ಷ ಅರವಿಂದ ಆಚಾರ್ಯ ಅಭ್ಯಾಗತರಾಗಿದ್ದರು.
ಬಾರ್ಕೂರು ದಾಮೋದರ ಶರ್ಮ `ಶ್ರೀಕೃಷ್ಣನ ಬೆಳಕು' ವಿಚಾರದಲ್ಲಿ ಉಪನ್ಯಾಸ ನೀಡಿದರು.
ಮಠದ ದಿವಾನ ನಾಗರಾಜ ಆಚಾರ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ವಿದ್ವಾಂಸ ಡಾ.ಗೋಪಾಲಾಚಾರ್ ನಿರೂಪಿಸಿದರು.
ಬಳಿಕ ಬೆಂಗಳೂರಿನ ಸಿಲಂಬಮ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಲಾವಿದರಿಂದ ಕೃಷ್ಣಾರ್ಪಣ ಭರತ ನಾಟ್ಯ ನಡೆಯಿತು.