-->
Udupi: ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ

Udupi: ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ

ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾಳಾದ ರಸ್ತೆಯ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಮಾಡುವುದರೊಂದಿಗೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಹವಾಮಾನ ಇಲಾಖೆಯಿಂದ ಪ್ರತಿದಿನ ನೀಡುವ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಒದಗಿಸಬೇಕು. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಹೋಗುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್ ಬಳಸುವಂತೆ ಮನವೊಲಿಸಬೇಕು. ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದಾಗ ಮೀನುಗಾರಿಕೆಗೆ ತೆರಳದಂತೆ ಎಚ್ಚರವಹಿಸಬೇಕು ಎಂದರು.


ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ಬಂದರಿನ ವಿಸ್ತರಣೆಗೆ ಯೋಜನೆ ರೂಪಿಸಬೇಕು. ನೂತನ ಹೆಜಮಾಡಿ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.


ಕರಾವಳಿ ಭಾಗಗಳಲ್ಲಿ ಕಡಲ್ಕೊರೆತ ಪ್ರತಿ ವರ್ಷವೂ ಉಂಟಾಗುತ್ತಿದೆ. ಅದರ ತಡೆಗೆ ಶಾಶ್ವತ ವೈಜ್ಞಾನಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು.


ಮಳೆಯಿಂದ ಭತ್ತದ ಬೆಳೆ ಹಾಗೂ ತೋಟಗಾರಿಕೆ ಹಾನಿಯನ್ನು ನಿಖರವಾಗಿ ಗುರುತಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದರು.


ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೈಗೊಂಡಿರುವ ಕಾಲುಸಂಕ ನಿರ್ಮಾಣ ಕಾಮಗಾರಿಯನ್ನು ಮಳೆ ಕಡಿಮೆಯಾದ ಕೂಡಲೇ ಪುನರಾರಂಭಿಸಿ, ತ್ವರಿತವಾಗಿ ಆದ್ಯತೆಯ ಮೇಲೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.


ಜಿಲ್ಲೆಯಲ್ಲಿ ಸಾರ್ವಜನಿಕರು ನೂತನ ಕಟ್ಟಡ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ 9/11ಎ ದಾಖಲೆ ಪಡೆಯಲು ಕೆಲವು ನಿಯಮಾವಳಿಗಳಿಂದ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ನಿಯಮಾವಳಿಯಲ್ಲಿ ಕೆಲವೊಂದು ವಿನಾಯಿತಿ ನೀಡಿದಲ್ಲಿ ಸಮಸ್ಯೆ ಪರಿಹರಿಸಬಹುದಾಗಿದ್ದು ಈ ಬಗ್ಗೆ ಸರಕಾರಕ್ಕೆ ಕೂಡಲೇ ಪ್ರಸ್ತಾವನೆ ಕಳುಹಿಸಲು ತಿಳಿಸಿದರು.


ಜಲ ಜೀವನ್ ಮಿಷನ್'ನಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರ ಒದಗಿಸುವ 525 ನಳ್ಳಿ ಸಂಪರ್ಕ ಕಾಮಗಾರಿಗಳಲ್ಲಿ 487 ಪೂರ್ಣಗೊಳಿಸಲಾಗಿದ್ದು, ಪ್ರಗತಿಯಲ್ಲಿರುವ 38 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು.
ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು‌ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article