
Kundapura: ಅಂಕಣ ಬರೆಹಗಾರ ಪ್ರಕಾಶ್ ಪಡಿಯಾರ್ ವಿಧಿವಶ
Tuesday, August 5, 2025
ಲೋಕಬಂಧು ನ್ಯೂಸ್, ಕುಂದಾಪುರ
ಹವ್ಯಾಸಿ ಪತ್ರಕರ್ತ, ಸಾಹಿತಿ, ಅಂಕಣ ಬರೆಹಗಾರ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮರವಂತೆ ಪ್ರಕಾಶ್ ಪಡಿಯಾರ್ (64) ಆಗಸ್ಟ್ 5ರಂದು ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪಡಿಯಾರ್, ಗ್ರಾಮೀಣ ಭಾಗದ ಸಮಸ್ಯೆ ಕುರಿತು ಬರೆದ ವರದಿಗಳು, ಆಡಳಿತ ವ್ಯವಸ್ಥೆಯ ಗಮನ ಸೆಳೆದು ಫಲಶ್ರುತಿ ಪಡೆಯುತ್ತಿದ್ದವು. ಹಲವಾರು ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದವು. ಕೆಲವು ವರ್ಷ ಕಾಲ ಜೀವವಿಮಾ ಏಜೆಂಟರಾಗಿ, ಮಾಧ್ಯಮಗಳಿಗೆ ಜಾಹೀರಾತು ಸಂಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ವಲ್ಪ ಕಾಲ ಉಡುಪಿಯ ಹೋಟೆಲೊಂದರಲ್ಲಿ ನೌಕರಿ ಮಾಡುತ್ತಿದ್ದರು.
ಸ್ನೇಹಮಯಿಯಾಗಿದ್ದ ಅವರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದರು.
ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಪಡಿಯಾರ್, ಜೀವನ ನಿರ್ವಹಣೆ ಎದುರಿಸಲು ಅಸಹಾಯಕರಾಗಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಆಶ್ರಮದ ಸಂಚಾಲಕಿ ತನುಲಾ ತರುಣ್ ಆಹಾರ, ಔಷಧೋಪಚಾರ ಒದಗಿಸಿ ಅಕ್ಕರೆಯಿಂದ ಪೋಷಿಸಿದ್ದರು.