Mangaluru: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: 18 ಕಡೆ ಎನ್ಐಎ ದಾಳಿ
Sunday, August 3, 2025
ಲೋಕಬಂಧು ನ್ಯೂಸ್, ಮಂಗಳೂರು
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳಿಂದ ಹಾಸನ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 18 ಕಡೆ ದಾಳಿ ನಡೆದಿದೆ.
ಸುಹಾಸ್ ಶೆಟ್ಟಿ ಹತ್ಯೆ ಸ್ಥಳದಲ್ಲಿದ್ದ ಅಪಾರ್ಟ್‌ಮೆಂಟ್ ಸೇರಿದಂತೆ ಮಂಗಳೂರು, ಬಜ್ಪೆ ಹಾಗೂ ಸುರತ್ಕಲ್'ಗಳಲ್ಲಿ ಹಲವರ ಮನೆ, ಕಚೇರಿ ಮೇಲೆ ದಾಳಿ ಮಾಡಿದ ಎನ್ಐಟಿ ತಂಡ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆ ಮಾಡಿದ ಮತ್ತು ಹತ್ಯೆಗೆ ಸಹಕರಿಸಿದವರು ಸೇರಿದಂತೆ 12 ಜನರನ್ನು ಬಜಪೆ ಪೊಲೀಸರು ಬಂಧಿಸಿದ್ದರು. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ 10 ಕಡೆ, ಹಾಗೂ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 4 ಕಡೆ ಎನ್ಐಎ ದಾಳಿ ಮಾಡಿದೆ. ಕೊಲೆ ಆರೋಪಿಗಳು ಹಾಗೂ ಎಸ್‌ಡಿಪಿಐ ಮುಖಂಡರ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮೇ 1ರಂದು ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜೂನ್ 1ರಂದು ರಾತ್ರಿ 8.30ಕ್ಕೆ ಮಂಗಳೂರು ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು.
ಸುಹಾಸ್ ಶೆಟ್ಟಿ ಕೊಲೆಗೆ 3 ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದರು.
ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
ಸುಹಾಸ್ ಶೆಟ್ಟಿ ಹತ್ಯೆಗೆ ದೇಶ, ವಿದೇಶಗಳಿಂದ ಫಂಡಿಂಗ್ ಆಗಿದೆ. ರಾಜ್ಯದ ಪೊಲೀಸ್ ಇಲಾಖೆಯಿಂದ ನಿಸ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆಯನ್ನು ಎನ್‌ಐಎಗೆ ಒಪ್ಪಿಸಬೇಕೆಂದು ಬಿಜೆಪಿ ಸೇರಿದಂತೆ ಹಿಂದೂ ಪರ ಕಾರ್ಯರ್ತರು ಮತ್ತು ವಿವಿಧ ಸಂಘಟನೆಗಳು ಹಾಗೂ ಸುಹಾಸ್ ಶೆಟ್ಟಿ ಕುಟುಂಬಸ್ಥರು ಕೂಡ ಎನ್ಐಎ ತನಿಖೆ ಮೂಲಕ ಮಾತ್ರ ತಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಒತ್ತಾಯಿಸಿದ್ದರು.
ಈಮಧ್ಯೆ ಅವರು ರಾಜ್ಯಪಾಲರ ಮೂಲಕ ಪ್ರಕರಣವನ್ನು ಎನ್‌ಐಎಗೆ ನೀಡುವಂತೆ ಮನವಿ ಮಾಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೂ ಈ ಹತ್ಯೆಯ ಹಿಂದಿರುವ ಶಕ್ತಿಗಳ ಬಗ್ಗೆ ತಂದಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಿಎಫ್‌ಐ ಕಾರ್ಯಕರ್ತರು ಶಾಮೀಲಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆ ಎನ್‌ಐಎ ತನಿಖೆಗೆ ವಹಿಸಿತ್ತು.