-->
ಧರ್ಮಸ್ಥಳದ ಕೀರ್ತಿಗೆ ಎಂದೂ ಚ್ಯುತಿ ಬಾರದು

ಧರ್ಮಸ್ಥಳದ ಕೀರ್ತಿಗೆ ಎಂದೂ ಚ್ಯುತಿ ಬಾರದು

ಲೋಕಬಂಧು ನ್ಯೂಸ್, ಧರ್ಮಸ್ಥಳ
ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ, ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕರು ಹೇಳಿದರು.ಶುಕ್ರವಾರ ಎಲ್ಲಾ ಜೈನಮಠಗಳ ಭಟ್ಟಾರಕರ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಉದ್ದೇಶ ವಿವರಿಸಿದರು.
ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದವರು ಹೇಳಿದರು.


ಎಲ್ಲಾ ಭಟ್ಟಾರಕರು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಆದುದರಿಂದ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ಹೇಳಿದರು.


ರಾಮಚಂದ್ರ, ಸೀತೆಯಂತೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ.


ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರು ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಹೆಗ್ಗಡೆ ಸಮಗ್ರ ಸಮಾಜದ ಚಕ್ರವರ್ತಿ. ಇಡೀ ರಾಷ್ಟ್ರದ ಮಹಾಪುರುಷ. ಅಧರ್ಮಿಗಳು ಷಡ್ಯಂತ್ರ ಹಾಗೂ ಅಸೂಯೆಯಿಂದ ಧರ್ಮಸ್ಥಳಕ್ಕೆ ಚ್ಯುತಿ ತರಲು ವಿಫಲ ಯತ್ನ ಮಾಡಿದ್ದಾರೆ. ಸರ್ವಧರ್ಮೀಯರ ಸಕಲ ಮಠ-ಮಂದಿರಗಳಿಗೂ ಸದಾ ನೆರವು, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವ ಹೆಗ್ಗಡೆ ಜೊತೆ ನಾವು ಸದಾ ಇದ್ದೇವೆ. ಹೆಗ್ಗಡೆ ಎಲ್ಲರಿಗೂ ಪೂಜ್ಯರು ಹಾಗೂ ಸರ್ವಮಾನ್ಯರು.


ಜೈನ ಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.


ಅಭಿನಂದನ ಭಾಷಣ ಮಾಡಿದ ಖ್ಯಾತ ಸಾಹಿತಿ ನಾಡೋಜ ಹಂಪನಾ (ಹಂಪ ನಾಗರಾಜಯ್ಯ), ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಂಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳ. ಅವರ ಮೌನದ ಶಕ್ತಿ ಮತ್ತು ಮೌಲ್ಯ ಕರ್ನಾಟಕದ ಮನೆಮಾತಾಗಿದೆ ಎಂದು ಶ್ಲಾಘಿಸಿ, ಅಭಿನಂದಿಸಿದರು.
ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ದಾರಿ ಹಿರಿಯರಿಗಿದೆ. ಸತ್ಯದ ಸ್ವರೂಪವನ್ನು ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿಂದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಹೆಗ್ಗಡೆ ಉತ್ತೀರ್ಣರಾಗಿ ಸತ್ಯದ ಸಾಕ್ಷಾತ್ಕಾರವಾಗಿದೆ.


ಹೆಗ್ಗಡೆಯವರ ಬೀಡಿನಲ್ಲಿ (ಮನೆಯಲ್ಲಿ), ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ ಎಂದು ಹಂಪನಾ ಹಾರೈಸಿದರು.


ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕರು ಮಾತನಾಡಿ, ಹೆಗ್ಗಡೆ ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು.


ಧರ್ಮಸ್ಥಳ ಸರ್ವಧರ್ಮೀಯರ ಮನೆ ಹಾಗೂ ಮನ ಬೆಳಗುವ ನಂದಾದೀಪ. ಅದನ್ನು ನಂದಿಸಲು ಹೋದರೆ ಧರೆಯೇ ಹೊತ್ತಿ ಉರಿಯಬಹುದು ಎಂದು ಎಚ್ಚರಿಸಿದರು.


ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕರು ಮಾತನಾಡಿ, ಜೈನ ಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ.



800 ವರ್ಷಗಳ ಹಿಂದೆ ತಮ್ಮ ವಾಸ್ತವ್ಯದ ಮನೆಯನ್ನೇ ಧರ್ಮದೇವತೆಗಳಿಗಾಗಿ ಬಿಟ್ಟುಕೊಟ್ಟವರು ಹೆಗ್ಗಡೆ ಪರಂಪರೆಯವರು. ಇಲ್ಲಿನ ಸರ್ವಧರ್ಮ ಸಮನ್ವಯ ಹಾಗೂ ಚತುರ್ವಿದ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ.


ಧರ್ಮ ಮತ್ತು ಧರ್ಮಸ್ಥಳದ ಸಂರಕ್ಷಣೆಯಲ್ಲಿ ತಾವೆಲ್ಲರೂ ಹೆಗ್ಗಡೆ ಜೊತೆ ಇದ್ದೇವೆ ಎಂದು ಭರವಸೆ ನೀಡಿದರು.


ತಮ್ಮ ಪೂರ್ವಾಶ್ರಮದಲ್ಲಿ ಉಜಿರೆಯಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಸಿದ್ಧವನ ಗುರುಕುಲ, ಪದವಿಪೂರ್ವ ಕಾಲೇಜು ಶಿಕ್ಷಣ ಹಾಗೂ ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು.


ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕರು ಮಾತನಾಡಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಗಾಗಿ ಧರ್ಮಸ್ಥಳದ ವತಿಯಿಂದ ಮಾಡುತ್ತಿರುವ ಸೇವಾಕಾರ್ಯ ವಿಶ್ವಮಾನ್ಯವಾಗಿದೆ. ಹಳ್ಳಿಯಿಂದ ದಿಲ್ಲಿಯ ವರೆಗೆ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಆರೋಗ್ಯ, ಶಿಕ್ಷಣ ಮತ್ತು ಇತರ ಬಹುಮುಖ ಸೇವಾ ಕಾರ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು.


ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.


ಸೋಂದಾ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ, ಸತ್ಯ ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಗೆ ಎಂದೂ ಅವಹೇಳನ ಸಲ್ಲದು ಎಂದರು.


ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕರು ಮಾತನಾಡಿ, ಧರ್ಮದಲ್ಲಿ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಕಿವಿಮಾತು ಹೇಳಿದರು. ತಮಗೆ ಸ್ವಾಮೀಜಿ ಆಗಿ ಪಟ್ಟಾಭಿಷೇಕವಾಗುವಾಗ 'ಅಪೇಕ್ಷೆಪಡಬೇಡಿ, ಉಪೇಕ್ಷೆ ಮಾಡಬೇಡಿ' ಎಂದು ಹೆಗ್ಗಡೆ ಹೇಳಿದ ಕಿವಿಮಾತನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು.


ಸನಾತನ ಧರ್ಮ ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಧರ್ಮಸ್ಥಳದ ಬಗ್ಗೆ ಅಸೂಯೆಯಿಂದ ಅಪಪ್ರಚಾರ ಮಾಡುವವರು 'ಮಾನಸಿಕ ಭಯೋತ್ಪಾದಕರು' ಎಂದು ಸ್ವಾಮೀಜಿ ಬಣ್ಣಿಸಿದರು.


ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ, ರಾಜಸ್ಥಾನ ತಿಜಾರ ಮಠದ ಸೌರಭಸೇನ ಭಟ್ಟಾರಕ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ,   ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿ ಧರ್ಮಸ್ಥಳ ಹಾಗೂ ಹೆಗ್ಗಡೆ ಜೊತೆ ಸದಾ ಸೇವೆಗೆ ಬದ್ಧ ಎಂದು ಭರವಸೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ.
ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂಥ ಪವಿತ್ರ ಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆ ಸಂತಸ ವ್ಯಕ್ತಪಡಿಸಿದರು.


ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. 'ಸಮ್ಯಕ್‌ ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ' ಎಂಬುದು ಜೈನ ಧರ್ಮದ ಸಾರ. ಅಂದರೆ, ಸರಿಯಾದ ತತ್ವ ಸಿದ್ಧಾಂತಗಳ ಬಗ್ಗೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಅದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ)ವನ್ನು ಜೈನರು ಧರಿಸುತ್ತಾರೆ.


ಇಂಥ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿ ಎಲ್ಲಾ ಭಟ್ಟಾರಕರಿಗೆ ಹೆಗ್ಗಡೆ ಕೃತಜ್ಞತೆ ವ್ಯಕ್ತಪಡಿಸಿದರು.


ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಸೋನಿಯಾ ವರ್ಮ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article