
Mysore: ಧರ್ಮಸ್ಥಳ ತನಿಖೆ ಎನ್ಐಎ ತನಿಖೆ ಅಗತ್ಯ ಇಲ್ಲ
Monday, August 25, 2025
ಲೋಕಬಂಧು ನ್ಯೂಸ್, ಮೈಸೂರು
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ಹೀಗೆ ತನಿಖೆ ಮಾಡಲಿ ಹಾಗೆ ತನಿಖೆ ಮಾಡಿ ಎಂದು ಹೇಳಲು ಆಗುವುದಿಲ್ಲ. ತನಿಖೆಗೆ ಏನು ಅಗತ್ಯವಿದೆಯೋ ಅದನ್ನು ಪೊಲೀಸರು ಮಾಡುತ್ತಾರೆ. ಮಂಪರು ಪರೀಕ್ಷೆ ಬೇಕೋ, ಬೇಡವೋ ಎಂಬುದನ್ನು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.
ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದವರ ಮಂಪರು ಪರೀಕ್ಷೆ ನಡೆಯಬೇಕೆಂಬ ಆಗ್ರಹ ಕುರಿತು ಪ್ರತಿಕ್ರಿಯಿಸಿ, ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ. ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯ ಇಲ್ಲ. ಹೇಳಿಕೆಗಳಿಂದ ಸತ್ಯ ಹೊರಬರುವುದಿಲ್ಲ. ಮೊದಲು ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು.
ತನಿಖೆ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇಷ್ಟೇ ಅವಧಿಯಲ್ಲಿ ತನಿಖೆ ಮಾಡಿ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಆದಷ್ಟು ಬೇಗ ತನಿಖೆ ಮುಗಿಸಲು ಸೂಚಿಸಿರುವುದಾಗಿ ತಿಳಿಸಿದರು.
ಧರ್ಮಸ್ಥಳಕ್ಕೆ ರ್ಯಾಲಿಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮಂಜುನಾಥನ ಸನ್ನಿಧಿಗೆ ಹೋಗುವವರನ್ನು ತಡೆಯಲು ಸಾಧ್ಯವೇ? ಪ್ರಕರಣವನ್ನು ಯಾರೂ ರಾಜಕೀಯ ಮಾಡಬಾರದು ಎಂಬುದೇ ತಮ್ಮ ಮನವಿ ಎಂದರು.
ಆರ್ಎಸ್ಎಸ್ ಕುರಿತ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು, ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹ ಇಲಾಖೆಯಲ್ಲಿ ಲಂಚಾವತಾರ ಇದೆ ಎಂಬ ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪ ಕುರಿತು ಪ್ರತಿಕ್ರಿಯಿಸಿ, ಸಾರಾ ಮಹೇಶ್ ಸಚಿವರಾಗಿದ್ದವರು. ಜವಾಬ್ದಾರಿಯುತ ಮುಖಂಡರೂ ಆಗಿದ್ದಾರೆ. ಯಾರು ಹಣ ಪಡೆದರು, ಯಾರು ನೀಡಿದರು ಎಂಬುದರ ಬಗ್ಗೆ ದೂರು ನೀಡಿದರೆ ತನಿಖೆ ಮಾಡಿಸುತ್ತೇವೆ. ಲಂಚ ನೀಡುತ್ತಿರುವುದು ತಿಳಿದಿದ್ದರೆ ಲಿಖಿತವಾಗಿ ದೂರು ನೀಡಲಿ, ತನಿಖೆ ನಡೆಸುತ್ತೇವೆ ಎಂದರು.