
Udupi: ನಾರಾಯಣ ಗುರು ವೃತ್ತ ತೆರವು ಮಾಡಿದವರನ್ನು ತಕ್ಷಣ ಬಂಧಿಸಿ
Sunday, August 31, 2025
ಲೋಕಂಧು ನ್ಯೂಸ್, ಉಡುಪಿ
ಬನ್ನಂಜೆ ಶ್ರೀ ನಾರಾಯಣ ಗುರು ಸಂಚಾರ ವೃತ್ತವನ್ನು ತೆರವುಗೊಳಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಬನ್ನಂಜೆ ನಾರಾಯಣ ಗುರು ಮಂದಿರದ ಬಳಿ ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ವೃತ್ತವನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವುದು ಖಂಡನೀಯ. ಉಡುಪಿ ನಗರಸಭೆ, ಸ್ಥಳೀಯ ಜನಪ್ರತಿನಿಧಿಗಳು ಅಥವಾ ಬನ್ನಂಜೆ ನಾರಾಯಣ ಗುರು ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡದೆ ತೆರವುಗೊಳಿಸಿರುವುದು ಅಕ್ಷಮ್ಯ ಹಾಗೂ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ.
ರಾಷ್ಟ್ರೀಯ ಹೆದ್ದಾರಿ ಅಗಲಗೊಂಡ ಬಳಿಕ ಬನ್ನಂಜೆ ವೃತ್ತದಲ್ಲಿ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಿ ಸುಸಜ್ಜಿತ ವೃತ್ತ ನಿರ್ಮಿಸುವ ಬಗ್ಗೆ ಈಗಾಗಲೇ ನಿರ್ಣಯ ಮಾಡಲಾಗಿದೆ.
ಹಲವು ವರ್ಷದ ಹಿಂದೆ ಸ್ಥಾಪಿಸಿದ್ದ ಸಂಚಾರ ವೃತ್ತವನ್ನು ಈಗ ತರಾತುರಿಯಲ್ಲಿ ತೆರವು ಮಾಡುವ ಮೂಲಕ ಉಡುಪಿ ಜನತೆಯ ಭಾವನೆಗೆ ಧಕ್ಕೆ ತಂದ ವ್ಯಕ್ತಿಯನ್ನು ತಕ್ಷಣ ಬಂಧಿಸಿ, ಹೊಸ ವೃತ್ತ ನಿರ್ಮಣಗೊಳ್ಳುವವರೆಗೆ ತೆರವು ಮಾಡಿರುವ ಸಂಚಾರ ವೃತ್ತವನ್ನು ಪುನರ್ ಅಳವಡಿಸುವಂತೆ ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.